ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಯ ಸದಸ್ಯರು ಸೋಮವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸರ್ವಾನುಮತದ ಬೆಂಬಲ ಸೂಚಿಸಿದ್ದಾರೆ.
ಸಿಡಬ್ಲ್ಯೂಸಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರು, ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು ಮತ್ತು ಮೋದಿ ಸರ್ಕಾರದ ಸರ್ವಾಧಿಕಾರತ್ವದ ವಿರುದ್ಧ ಹೋರಾಟಲು ಇದು ಸೂಕ್ತ ಸಮಯ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೇರಿದಂತೆ ಸಿಡಬ್ಲ್ಯುಸಿ ಸದಸ್ಯರು ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಬಲವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರಾಹುಲ್ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅವರು, 'ಕಾಂಗ್ರೆಸ್ ಪಕ್ಷ ಮತ್ತು ಸಿಡಬ್ಲ್ಯುಸಿ ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ಬದ್ಧ ಮತ್ತು ಸವಾಲುಗಳನ್ನು ಎದುರಿಸಲು ರಾಹುಲ್ ಸಿದ್ಧವಿರುವುದಾಗಿ' ಹೇಳಿದ್ದಾರೆ ಎಂದರು.
ಇಂದು ನಡೆದ ಸಿಡಬ್ಲ್ಯುಸಿ ಸಭೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗೈರು ಆಗಿದ್ದರು. ಹೀಗಾಗಿ ರಾಹುಲ್ ನೇತೃತ್ವದಲ್ಲೇ ಸಭೆ ನಡೆಸಲಾಯಿತು.
46 ವರ್ಷದ ರಾಹುಲ್ ಗಾಂಧಿ ಅವರು 2013ರ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.