ದೇಶ

ಬ್ಯಾಂಕ್ ಗಳಿಗೆ ಭೇಟಿ ನೀಡಿ, ಕ್ಯೂನಲ್ಲಿದ್ದ ಜನರ ಕಷ್ಟ ವಿಚಾರಿಸಿದ ಮಮತಾ ಬ್ಯಾನರ್ಜಿ

Lingaraj Badiger
ಕೋಲ್ಕತಾ: ಕೇಂದ್ರ ಸರ್ಕಾರದ ನೋಟ್ ನಿಷೇಧದ ನಿರ್ಧಾರವನ್ನು ವಿರೋಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಕೋಲ್ಕತಾದ ಹಲವು ಕಡೆ ಬ್ಯಾಂಕ್ ಹಾಗೂ ಎಟಿಎಂಗಳಿಗೆ ಭೇಟಿ ನೀಡಿ, ಕ್ಯೂನಲ್ಲಿ ನಿಂತಿದ್ದ ಜನರ ಕಷ್ಟ ವಿಚಾರಿಸಿದರು.
ಮಮತಾ ಬ್ಯಾನರ್ಜಿ ಅವರು ಇಂದು ದಕ್ಷಿಣ ಕೋಲ್ಕತಾದ ಜವಾಹರಲಾಲ್ ನೆಹರೂ ರಸ್ತೆಯ, ಆಶುತೋಶ್ ಮುಖರ್ಜಿ ರಸ್ತೆ ಹಾಗೂ ಶರತ್ ಬೋಸ್ ರಸ್ತೆಯಲ್ಲಿರುವ ಬ್ಯಾಂಕ್ ಗಳಿಗೆ ಭೇಟಿ, ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿಯೊಂದಿಗೆ ಮಾತನಾಡಿದರು.
ಕ್ಯೂನಲ್ಲಿದ್ದ ಗ್ರಾಹಕನೊಬ್ಬ ಬ್ಯಾಂಕ್ ನವರು ನಮಗೆ 100 ರುಪಾಯಿ ನೋಟ್ ಕೊಡುತ್ತಿಲ್ಲ ಎಂದು ಮಮತಾ ಬಳಿ ದೂರಿದರು, ಇದಕ್ಕೆ ಪ್ರತಿಕ್ರಿಸಿದ ಸಿಎಂ, 'ನಿನಗೆ 100 ರುಪಾಯಿ ನೋಟ್ ಗಳು ಬೇಕು ಅಂತ ನನಗೆ ಗೊತ್ತು. 2000 ರುಪಾಯಿ ನೋಟ್ ನೀಡುವುದರಿಂದ ನಿನ್ನ ಸಮಸ್ಯೆ ಪರಿಹಾರವಾಗಲ್ಲ' ಎಂದರು. ಅಲ್ಲದೆ 2000 ರುಪಾಯಿ ನೋಟ್ ತಿರಸ್ಕರಿಸುವಂತೆ ಜನತೆಗೆ ಸೂಚಿಸಿದರು.
ಇದಕ್ಕು ಮುನ್ನ ಈ ಸಂಬಂಧ ಟ್ವೀಟರ್ ಮೂಲಕ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮಮತಾ, ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟು ಮೇಲಿನ ನಿಷೇಧ ಹೇರಿಕೆಯಿಂದಾಗಿ ಕೇವಲ ಸಾಮಾನ್ಯ ಜನರಿಗಷ್ಟೇ ಸಂಕಷ್ಟ ಎದುರಾಗಿದೆ. ಕಾಳಧನಿಕರಿಗೆ ಇದು ಸಹಾಯಕವಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ ಕೇಂದ್ರ ಸರ್ಕಾರ ತನ್ನ ಕೆಟ್ಟ ರಾಜಕೀಯ ನಿರ್ಧಾವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.
SCROLL FOR NEXT