ದೇಶ

ಮಾಜಿ ಪ್ರಧಾನಿ ದಿ.ಪಂಡಿತ್ ಜವಹರಲಾಲ್ ನೆಹರೂ ಜನ್ಮದಿನ: ಗಣ್ಯರ ನಮನ

Sumana Upadhyaya
ನವದೆಹಲಿ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರ 127ನೇ ಜನ್ಮ ದಿನವಿಂದು. ದೇಶಾದ್ಯಂತ ಈ ದಿನವನ್ನು ಮಕ್ಕಳ ದಿನಾಚರಣೆಯೆಂದು ಆಚರಿಸುತ್ತೇವೆ. 
ನೆಹರೂ ಜನ್ಮ ದಿನಾಚರಣೆ ಕಾರ್ಯಕ್ರಮ ಇಂದು ಬೆಳಗ್ಗೆಯಿಂದಲೇ ಆರಂಭವಾಗಿದೆ. ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಯಮುನಾ ನದಿ ದಂಡೆಯ ಮೇಲೆ ಶಾಂತಿವನದಲ್ಲಿರುವ ನೆಹರೂರವರ ಸ್ಮಾರಕಕ್ಕೆ ತೆರಳಿ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು.
ರಾಷ್ಟ್ರಪತಿಗಳು ಮಾತ್ರವಲ್ಲದೆ ಉಪ ರಾಷ್ಟ್ರಪತಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ನೆಹರೂರವರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು. 
ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ, ಪಂಡಿತ್ ಜವಹರಲಾಲ್ ನೆಹರೂರವರ ಜನ್ಮ ದಿನಾಚರಣೆ ಅಂಗವಾಗಿ ಗೌರವ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.
ಪಂಡಿತ್ ನೆಹರೂ ನವೆಂಬರ್ 14, 1889ರಲ್ಲಿ ಜನಿಸಿದ್ದರು. ಮೊದಲ ಪ್ರಧಾನಿಯಾಗಿ ನೇಮಕಗೊಂಡ ನೆಹರೂ 1964ರಲ್ಲಿ ಸಾವಿಗೀಡಾಗುವವರೆಗೆ ಪ್ರಧಾನಿಯಾಗಿದ್ದರು.
SCROLL FOR NEXT