ಜಮ್ಶೆಡ್ಪುರ: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆಂದು ಶಂಕಿಸಿ ಉದ್ಯಮಿಯೊಬ್ಬರನ್ನು ನಕ್ಸಲರ ಗುಂಪೊಂದು ಹತ್ಯೆ ಮಾಡಿ, ನಂತರ ಆತನ ಕಾರಿಗೆ ಬೆಂಕಿ ಹಚ್ಚಿರುವ ಘಟನೆಯೊಂದು ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಯೋಗೇಶ್ ಮಿಶ್ರ (40) ಮೃತ ಉದ್ಯಮಿಯಾಗಿದ್ದು, ಈತ ಹಲವು ವರ್ಷಗಳಿಂದಲೂ ನರ್ಸಿಂಗ್ ಹೋಮ್ ವೊಂದನ್ನು ನಡೆಸುತ್ತಿದ್ದ. ಅಲ್ಲದೆ, ನಕ್ಸಲರೊದಿಗೆ ಸಂಪರ್ಕವನ್ನು ಹೊಂದಿದ್ದ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ತಮ್ಮ ನರ್ಸಿಂಗ್ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರನ್ನು ಕರೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿರುವ ನಕ್ಸಲರು ಯೋಗೇಶ್ ಮಿಶ್ರ ಅವರನ್ನು ಹತ್ಯೆ ಮಾಡಿದ್ದಾರೆ. ನಂತರ ಕಾರಿನಲ್ಲಿ ನರ್ಸ್ ಕುಳಿತಿದ್ದ ವೇಳೆಯೇ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೋಗೇಶ್ ಮಿಶ್ರ ಅವರು ನಕ್ಸಲರೊಂದಿಗೆ ಸಂಪರ್ಕವನ್ನು ಹೊಂದಿದ್ದ. ನರ್ಸಿಂಗ್ ಹೋಂನಿಂದ ಕಳೆದ ರಾತ್ರಿ ಹೊರಡುವಾಗಲೂ ಫೋನಿನಲ್ಲಿ ನಕ್ಸಲರೊಂದಿಗೆ ಮಾತಾನಾಡಿದ್ದ. ಯೋಗೇಶ್ ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದ ಎಂಬುದನ್ನು ಅವರ ಕುಟುಂಬಸ್ಥರೂ ಕೂಡ ದೃಢಪಡಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರು.500 ಹಾಗೂ 1,000 ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬಳಿಕ ನಕ್ಸಲರ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡಿಕೊಡುವಂತೆ ನಕ್ಸಲರು ಯೋಗೇಶ್ ನನ್ನು ಪೀಡಿಸಿರಬಹುದು, ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆಂದು ಶಂಕಿಸಿಯೂ ಆತನನ್ನು ಹತ್ಯೆ ಮಾಡಿರಬಹುದು. ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು. ಎಲ್ಲಾ ರೀತಿಯ ಆಯಾಮದಲ್ಲಿಯೂ ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.