ತಿರುವನಂತಪುರಂ: ಜನರು ಹೇಗೆ ಬದುಕಬೇಕು, ಜೀವನವನ್ನು ಸಾಗಿಸಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸಿಪಿಐ-ಎಂ ನಾಯಕ ಸೀತಾರಾಮ್ ಎಚೂರಿ ಹೇಳಿದ್ದಾರೆ.
500, 1000 ರೂ ನೋಟುಗಳ ನಿಷೇಧವನ್ನು ವಿರೋಧಿಸಿ ಕೇರಳ ಸಿಎಂ, ಸಚಿವರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿರುವ ಸೀತಾರಾಮ್ ಯೆಚೂರಿ, ಸಂವಿಧಾನದ ಪ್ರಕಾರ ಜನರೇ ಸರ್ವೋಚ್ಛ, ಜನರು ಹೇಗೆ ಬದುಕಬೇಕೆಂಬುದನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಲು ಸಾಧ್ಯವಿಲ್ಲ, ಜನರು ಹೀಗೆಯೇ ಬದುಕಬೇಕೆಂದು ನಿರ್ಧರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ಎಲ್ಲಾ ಸರ್ಕಾರಗಳೂ ಸಮಸ್ಯೆ ಎದುರಿಸಿವೆ, ಇದರಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ಎಲ್ಲಾ ಸರ್ಕಾರಗಳೂ ಆಗ್ರಹಿಸಲಿವೆ ಎಂದು ಸೀತಾರಾಮ್ ಯೆಚೂರಿ ತಿಳಿಸಿದ್ದಾರೆ.