ಹೈದರಾಬಾದ್: 2013, ಫೆಬ್ರವರಿಯಲ್ಲಿ ಹೈದರಾಬಾದ್ ನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪುನ್ನು ವಿಶೇಷ ಕೋರ್ಟ್ ಡಿಸೆಂಬರ್ 13ರಂದು ಪ್ರಕಟಿಸಲಿದೆ.
ಎನ್ ಐಎ ವಿಶೇಷ ಕೋರ್ಟ್ ದಿಲ್ ಸುಖ್ ನಗರದಲ್ಲಿನ ವೆಂಕಟಾದ್ರಿ ಚಿತ್ರಮಂದಿರದ ಸಮೀಪ ಸಂಭವಿಸಿದ ಅವಳಿ ಬಾಂಬ್ ಸ್ಪೋಟ ಪ್ರಕರಣದ ವಿಚಾರಣೆಯನ್ನು ನವೆಂಬರ್ 7ರಂದು ಮುಕ್ತಾಯಗೊಳಿಸಿದ್ದು, ನವೆಂಬರ್ 21ಕ್ಕೆ ತೀರ್ಪು ಕಾಯ್ದಿರಿಸಿತ್ತು.
ಪ್ರಕರಣದ ಪ್ರಮುಖ ಆರೋಪಿ ಇಂಡಿಯನ್ ಮುಜಾಹಿದ್ದೀನ್ ಸ್ಥಾಪಕ ರಿಯಾಜ್ ಭಟ್ಕಳ್ ಇನ್ನು ತಲೆಮರೆಸಿಕೊಂಡಿದ್ದು, ಇತರೆ ಐವರು ಆರೋಪಿಗಳಾದ ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್, ಪಾಕಿಸ್ತಾನದ ಪ್ರಜೆ ಝಿಯಾ ಉರ್ ರೆಹಮಾನ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ತಹಸೀನ್ ಅಖ್ತರ್ ಅಲಿಯಾಸ್ ಮೋನು ಹಾಗೂ ಐಜಾಝ್ ಶೇಕ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ.
ಸದ್ಯ ಚೆರ್ಲಪಲ್ಲಿ ಜೈಲಿನಲ್ಲಿರುವ ಐವರು ಆರೋಪಿಗಳನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಂತಿಮ ತೀರ್ಪನ್ನು ಡಿಸೆಂಬರ್ 13ಕ್ಕೆ ಕಾಯ್ದಿರಿಸಲಾಗಿತ್ತು.
2013, ಫೆಬ್ರವರಿ 21ರಂದು ಸಂಭವಿಸಿದ್ದ ಈ ಅವಳಿ ಸ್ಫೋಟದಲ್ಲಿ 18 ಮಂದಿ ಮೃತಪಟ್ಟಿದ್ದರು ಮತ್ತು 131ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.