ದೇಶ

ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಕುಟುಂಬದ ಸ್ವಿಸ್ ಖಾತೆ ಬಹಿರಂಗಪಡಿಸಿದ ಕೇಜ್ರಿವಾಲ್

Lingaraj Badiger
ಚಂಡೀಗಢ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಅವರ ಕುಟುಂಬದ ಸ್ವಿಸ್ ಬ್ಯಾಂಕ್ ಖಾತೆಯನ್ನು ಸೋಮವಾರ ಬಹಿರಂಗಪಡಿಸಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಸಿಂಗ್ ಹಾಗೂ ಅವರ ಪತ್ನಿ ಪ್ರಣೀತ್ ಕೌರ್ ಅವರ ಸ್ವಿಸ್ ಖಾತೆಯ ವಿವರವನ್ನು ಇಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ ಕೇಜ್ರಿವಾಲ್ ಅವರು, ಅಮರಿಂದರ್ ಸಿಂಗ್ ಅವರು 2005ರಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ವೇಳೆ ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ತೆಗೆದಿದ್ದು, ಖಾತೆ ನಂ. 509018445 ಎಂದು ಹೇಳಿದರು. ಅಲ್ಲದೆ ಈ ಖಾತೆಗೆ ಭಾರಿ ಮೊತ್ತದ ಜಮೆಯಾಗಿತ್ತು ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ.
ಅಮರಿಂದರ್ ಸಿಂಗ್ ಅವರ ಪುತ್ರ ರಣಿಂದರ್ ಸಿಂಗ್ ಸಹ ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಅವರ ಖಾತೆ ನಂ.5090184484. ಇದಲ್ಲದೆ ಸಿಂಗ್ ಕುಟುಂಬ ಒಂದು ಟ್ರಸ್ಟ್ ಅನ್ನು ಹೊಂದಿದ್ದು, ಅದರ ಮೂಲಕ ಅಕ್ರಮ ವರ್ಗಾವಣೆಯಾಗಿದೆ. ಟ್ರಸ್ಟ್ ನ ಬ್ಯಾಂಕ್ ಖಾತೆ ನಂ.5090284483 ಎಂದು ಕೇಜ್ರಿವಾಲ್ ತಿಳಿಸಿದರು.
ಈ ಕುರಿತು ಕ್ಯಾಪ್ಟನ್ ಗೆ ಬಹಿರಂಗ ಸವಾಲು ಹಾಕಿದ ಆಪ್ ನಾಯಕ, ಒಂದು ವೇಳೆ ನಾನು ನೀಡಿದ ಮಾಹಿತಿ ತಪ್ಪಾಗಿದ್ದರೆ ಅಮರಿಂದರ್ ಸಿಂಗ್ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು ಎಂದರು.
ಇದೇ ವೇಳೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥನ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್ ಅವರು, 2002ರಲ್ಲಿ ಅಮರಿಂದರ್ ಸಿಂಗ್ ಅವರು ಅಧಿಕಾರಕ್ಕೆ ಬರುವ ಮುನ್ನ ಮೊತಿ ಮಹಲ್ ಪಡೆಯಲು ಹಣವಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಮೂರೇ ವರ್ಷದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ತೆಗೆದಿದ್ದಾರೆ ಎಂದು ಆರೋಪಿಸಿದರು.
SCROLL FOR NEXT