ಸುಪ್ರೀಂ ಕೋರ್ಟ್(ಸಂಗ್ರಹ ಚಿತ್ರ)
ನವದೆಹಲಿ: 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿರುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್ ಗೆ ಉತ್ತರ ನೀಡಿ, ಪಾಕಿಸ್ತಾನದಿಂದ ಹರಿದುಬರುತ್ತಿರುವ ನಕಲಿ ನೋಟುಗಳು, ಕಪ್ಪು ಹಣಕ್ಕೆ ಕಡಿವಾಣ ಹಾಕಿ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಹಾಯ ಮಾಡುವ ಉದ್ದೇಶವಾಗಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಕೇಂದ್ರ ಸರ್ಕಾರ, ನೋಟುಗಳ ರದ್ದತಿಯಿಂದ ಆಗಿರುವ ಉತ್ತಮ ಪರಿಣಾಮಗಳನ್ನು ವಿವರಿಸಿದೆ. ದೇಶದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ದು ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಿ ನಗರ ಪ್ರದೇಶಗಳಲ್ಲಿ ಬಡಜನರಿಗೆ ವಸತಿ ಸೌಲಭ್ಯ ದೊರಕುವಂತೆ ಮಾಡುವುದಾಗಿದೆ ಎಂದು ಹೇಳಿದೆ.
2014-15ರಲ್ಲಿ 1000 ರೂಪಾಯಿಗಳ 22.4 ಲಕ್ಷ ನಕಲಿ ನೋಟುಗಳು ಚಲಾವಣೆಯಲ್ಲಿದ್ದವು. 500 ರೂಪಾಯಿಗಳ 37.5 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಸರ್ಕಾರ ಹೇಳಿದೆ.
ಕಪ್ಪು ಹಣ ಚಲಾವಣೆಯನ್ನು ಹೊಡೆದೋಡಿಸಲು ಮತ್ತು ಕ್ಯಾಶ್ ರಹಿತ ಹಣದ ಚಲಾವಣೆಯನ್ನು ಪ್ರಚಾರಮಾಡಲು ಬಹು ದೀರ್ಘ ಕಾಲದ ಮತ್ತು ಮಾಪನಾಂಕ ವಿಧಾನವನ್ನು ಕೇಂದ್ರ ಸರ್ಕಾರ ಅಳವಡಿಸುತ್ತಿದ್ದು, ನೋಟುಗಳ ರದ್ದತಿ ಆ ದಿಕ್ಕಿನೆಡೆಗೆ ಒಂದು ಹೆಜ್ಜೆಯಾಗಿದೆ ಎಂದು ಅಫಿಡವಿಟ್ಟಿನಲ್ಲಿ ತಿಳಿಸಲಾಗಿದೆ ಎಂದು ಸರ್ಕಾರಿ ಪರ ವಕೀಲ ಮುಕುಲ್ ರೊಹ್ ಟಗಿ ತಿಳಿಸಿದ್ದಾರೆ.
ಅತಿ ಹೆಚ್ಚು ಮೌಲ್ಯದ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದರಿಂದ ಭಯೋತ್ಪಾದಕರು ಹಣವನ್ನು ಸಂಗ್ರಹಿಸುವುದನ್ನು ತಪ್ಪಿಸಬಹುದು. ದೇಶದ ಆರ್ಥಿಕ ಬೆಳವಣಿಗೆಗೆ ಕರಿನೆರಳಾಗಿರುವ ಕಪ್ಪು ಹಣವನ್ನು ತೊಲಗಿಸುವ ಉದ್ದೇಶವೂ ಇದರ ಹಿಂದೆ ಇದೆ. ಕಪ್ಪು ಹಣದಿಂದ ಈ ದೇಶದ ಬಡ ಮತ್ತು ಮಧ್ಯಮ ವರ್ಗದ ಜನತೆ ತೊಂದರೆ ಅನುಭವಿಸುತ್ತಿದ್ದು, ಅವರಿಗೆ ಇದರಿಂದ ಪ್ರಯೋಜನವಾಗಲಿದೆ. ತೆರೆಗೆ ಕಟ್ಟುವುದನ್ನು ತಪ್ಪಿಸುವುದನ್ನು ತಡೆಯುವುದಲ್ಲದೆ ಹೆಚ್ಚಿನ ಹಣದ ಚಲಾವಣೆಯಾಗುತ್ತದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ವಿವರಣೆ ನೀಡಿದೆ.
ನೋಟುಗಳ ರದ್ದತಿ ಕುರಿತು ಸಲ್ಲಿಸಲಾಗಿರುವ ಅನೇಕ ಮನವಿಗಳ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ.
ವಿವಿಧ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಲ್ಲಿ, 500 ಮತ್ತು 1000 ನೋಟುಗಳ ರದ್ದತಿ ಕುರಿತ ವಿಚಾರಣೆಗೆ ತಡೆಯೊಡ್ಡಲು ಸುಪ್ರೀಂ ಕೋರ್ಟ್ ಕಳೆದ 18ರಂದು ನಿರಾಕರಿಸಿತ್ತು.