ನವದೆಹಲಿ: ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಮಾತನಾಡಲು ಸಿದ್ಧರಿದ್ದಾರೆ. ಆದರೆ ಪ್ರತಿಪಕ್ಷಗಳು ಚರ್ಚೆಯನ್ನು ಮತಕ್ಕೆ ಹಾಕಬೇಕು ಎಂಬ ಬೇಡಿಕೆಯನ್ನು ಕೈಬಿಡಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರದ ಉದ್ದೇಶವನ್ನು ಯಾರೊಬ್ಬರು ಪ್ರಶ್ನೆ ಮಾಡುತ್ತಿಲ್ಲ ಎಂದುರು. ಅಲ್ಲದೆ ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೋಟ್ ನಿಷೇಧ ಜಾರಿಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳ ದೂರು ಮತ್ತು ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ. ಪ್ರತಿಪಕ್ಷಗಳ ಬೇಡಿಕೆಯಂತೆ ಪ್ರಧಾನಿ ಸಹ ಸದನಕ್ಕೆ ಆಗಮಿಸಿ, ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಯಾವ ಸೆಕ್ಷನ್ ಅಡಿ ಚರ್ಚೆಗೆ ಸ್ವೀಕರಿಸಬೇಕು ಎಂಬುದನ್ನು ಸ್ವೀಕರ್ ನಿರ್ಧರಿಸಲಿ ಎಂದು ರಾಜನಾಥ್ ಸಿಂಗ್ ಅವರು ಶೂನ್ಯ ವೇಳೆಯಲ್ಲಿ ಹೇಳಿದರು.
ಕೇಂದ್ರ ಸಚಿವರ ಹೇಳಿಕೆ ಒಪ್ಪದ ಪ್ರತಿಪಕ್ಷಗಳು, ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದವು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಟಿಎಂಸಿಯ ಸುದೀಪ್ ಬಂಡೋಪಧ್ಯಾಯ ಹಾಗೂ ಎಸ್ಪಿಯ ಮುಲಾಯಂ ಸಿಂಗ್ ಯಾದವ್ ಅವರು ಪ್ರಧಾನಿ ಮೋದಿ ಅವರೇ ನಮ್ಮ ಪ್ರಶ್ನೆಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ.