ದೇಶ

ಸರ್ಕಾರದ ಅನುಮತಿಯಿಲ್ಲದೆ ನೇಪಾಳದಲ್ಲಿ ಹೂಡಿಕೆ ಮಾಡಿದ ರಾಮ್ ದೇವ್: ವರದಿ

Lingaraj Badiger
ಕಠ್ಮಂಡು: ಯೋಗ ಗುರು ಬಾಬಾ ರಾಮ್ ದೇವ್ ಅವರು ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದು, ಅವರ ಪತಂಜಲಿ ಆಯುರ್ವೇದ್ ಗ್ರೂಪ್ ನೇಪಾಳದಲ್ಲಿ ಸರ್ಕಾರದ ಅಧಿಕೃತ ಅನುಮತಿ ಇಲ್ಲದೆ 150  ಕೋಟಿ ರುಪಾಯಿ ಹೂಡಿಕೆ ಮಾಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ನೇಪಾಳದಲ್ಲಿ ಹೂಡಿಕೆ ಮಾಡಬೇಕಾದರೆ ವಿದೇಶಿ ಹೂಡಿಕೆ ಮತ್ತು ತಂತ್ರಜ್ಞಾನ ವರ್ಗಾವಣೆ ಕಾಯ್ದೆ ಪ್ರಕಾರ ಹೊರ ದೇಶದ ಹೂಡಿಕೆದಾರರು ನೇಪಾಳದ ಹೂಡಿಕೆದಾರರ ಮಂಡಳಿ ಅಥವಾ ಕೈಗಾರಿಕಾ ಇಲಾಖೆಯ ಅನುಮತಿ ಪಡೆಯಬೇಕು. ಆದರೆ ಬಾಬಾ ರಾಮ್ ದೇವ್ ಅವರು ಹೂಡಿಕೆ ಮಾಡುವಾಗ ಯಾವುದೇ ಅನುಮತಿ ಪಡೆದಿಲ್ಲ ಎಂದು ನೇಪಾಳದ ಕಾಂತೀಪುರ್ ದೈನಿಕ ವರದಿ ಮಾಡಿದೆ.
ಮಾಧ್ಯಮ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಾಬಾ ರಾಮ್ ದೇವ್ ಅವರು, ತಮ್ಮ ಕಂಪನಿ ನೇಪಾಳದಲ್ಲಿ ಚಟುವಟಿಕೆ ನಡೆಸುವಾಗ ಅಲ್ಲಿನ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ. ಪತಂಜಲಿ ಆಯುರ್ವೇದ ಲಿಮಿಟೆಡ್‍ ಹೂಡಿಕೆ ಮಾಡಬೇಕಾದರೆ ನೇಪಾಳದಲ್ಲಿನ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿಯೇ ಮುಂದಿನ ಕಾರ್ಯ ಮಾಡಲಿದೆ ಎಂದು ಹೇಳಿದ್ದಾರೆ.
ಬಾಬಾ ರಾಮ್ ದೇವ್ ಪ್ರಕಾರ, ನೇಪಾಳದಲ್ಲಿರುವ ಪತಂಜಲಿ ಯೋಗಪೀಠವು ಯಾವುದೇ ಹೂಡಿಕೆಯನ್ನು ನೇಪಾಳದಲ್ಲಿ ಮಾಡಿಲ್ಲ. ನೇಪಾಳದಲ್ಲಿರುವ ಪತಂಜಲಿ ಯೋಗಪೀಠದ ಎಲ್ಲ ಹೂಡಿಕೆಯು ನೇಪಾಳದ ಉದ್ಯಮಿ ಉಪೇಂದ್ರ ಮಹತೋ ಮತ್ತು ಆತನ ಪತ್ನಿ ಸಮಾಂತ ಅವರದ್ದಾಗಿದೆ. ಮುಂದಿನ ದಿನಗಳಲ್ಲಿ ಒಂದು ವೇಳೆ ನಮ್ಮ ಕಂಪನಿ ಅಲ್ಲಿ ಹೂಡಿಕೆ ಮಾಡುವುದಾದರೆ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದ ನಂತರವೇ ಹೂಡಿಕೆ ಮಾಡುತ್ತೇವೆ ಎಂದು ಬಾಬಾ ರಾಮ್ ದೇವ್ ಸ್ಪಷ್ಟಪಡಿಸಿದ್ದಾರೆ.
ಭ್ರಷ್ಟಚಾರದ ವಿರುದ್ಧ ಹೋರಾಡುವುದಕ್ಕಾಗಿಯೇ ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಹೀಗಿರುವಾಗ ನಾನು ನೇಪಾಳದಲ್ಲಿ ಅಕ್ರಮ ಹೂಡಿಕೆ ಮಾಡಲು ಸಾಧ್ಯವೇ? ಎಂದು ರಾಮ್ ದೇವ್ ಪ್ರಶ್ನಿಸಿದ್ದಾರೆ.
SCROLL FOR NEXT