ನವದೆಹಲಿ: ಯುಪಿಎಸ್ ಪರೀಕ್ಷೆಯ ಟಾಪರ್ ಟೀನಾ ದಬಿ ತಾನು ಸೆಕೆಂಡ್ ರ್ಯಾಂಕ್ ಪಡೆದ ಅತರ್ ಅಮೀರ್ ಉಲ್ ಶಫಿಯನ್ನು ಮದುವೆಯಾಗುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸುತ್ತಿದ್ದಂತೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಅದನ್ನು ವಿರೋಧಿಸುತ್ತಿದೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ್ದು ಹೆಮ್ಮೆಯ ವಿಷಯವಾದರೆ ಅವರು ಮುಸ್ಲಿಂನನ್ನು ಮದುವೆಯಾಗುತ್ತಿರುವುದು ನೋವಿನ ಸಂಗತಿ ಎಂದು ಹೇಳಿದೆ.
ಹಿಂದೂ ಬಲಪಂಥೀಯ ಬಣದ ಪ್ರಧಾನ ಕಾರ್ಯದರ್ಶಿ ಮುನ್ನಾ ಕುಮಾರ್ ಶರ್ಮಾ ಟೀನಾ ದಬಿ ತಾಯಿಗೆ ಬರೆದ ಪತ್ರದಲ್ಲಿ ಅತರ್ ಜೊತೆಗೆ ಟೀನಾ ಸಂಬಂಧ ಲವ್ ಜಿಹಾದ್ ಆಗಿದೆ ಎಂದು ಬರೆದಿದ್ದಾರೆ.
ಸಬ್ರಂಗ್ ಇಂಡಿಯಾದಲ್ಲಿ ಬಂದ ಪ್ರಕಾರ, ಅತರ್ ಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮನವೊಲಿಸಬೇಕೆಂದು ಮುನ್ನಾ ಕುಮಾರ್ ಶರ್ಮ ಹೇಳಿದ್ದಾರೆಂದು ಪ್ರಕಟವಾಗಿದೆ.
ಸರಿಯಾಗಿ ಯೋಚಿಸುವಂತೆ ಮತ್ತು ಪಿತೂರಿ ನಡೆಸುವವರ ವಿರುದ್ಧ ಹೋರಾಡಲು ಕೈ ಜೋಡಿಸುವಂತೆ ಪತ್ರದಲ್ಲಿ ಅವರು ಬರೆದಿರುವುದಾಗಿ ಫೈನಾನ್ಷಿಯಲ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿ ಫಾರ್ ಅಡ್ಮಿನಿಸ್ಟ್ರೇಷನ್ ಜೊತೆ ಇಂಗ್ಲೀಷ್ ದೈನಿಕವೊಂದಕ್ಕೆ ಮಾತನಾಡಿದ್ದ ಟೀನಾ, ಸರ್ಕಾರಿ ಕಟ್ಟಡದಲ್ಲಿ ನಮ್ಮ ಪ್ರೀತಿ ಅರಳಿದೆ ಎಂದು ಹೇಳಿದ್ದರು.
ಟೀನಾ ಮತ್ತು ಅತರ್ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿ ಕಳೆದ ಮೇ 11ರಂದು ಸನ್ಮಾನ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು. ನಾವು ಬೆಳಗ್ಗೆ ಭೇಟಿಯಾಗಿದ್ದೆವು. ಸಾಯಂಕಾಲದ ಹೊತ್ತಿಗೆ ಅಮೀರ್ ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದರು. ಅವರಿಗೆ ಲವ್ ಅಟ್ ಫಸ್ಟ್ ಸೈಟ್ ನಲ್ಲಿ ನನ್ನ ಮೇಲೆ ಪ್ರೀತಿಯಾಗಿತ್ತು ಎಂದು ಹೇಳಿದ್ದಾರೆ.
ಟೀನಾ ಅವರು ಅತರ್ ಪ್ರೇಮ ನಿವೇದನೆಗೆ ಸಮ್ಮತಿ ಸೂಚಿಸಿದ್ದು ಆಗಸ್ಟ್ ನಲ್ಲಿ. ಸಮಾಜದ ಕೆಲವರಿಂದ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಟೀನಾ, ನಾವು ಪ್ರೀತಿಸುತ್ತಿದ್ದು ತುಂಬಾ ಸಂತೋಷವಾಗಿದ್ದೇವೆ. ಆದರೆ ಇಂತಹ ವಿರೋಧಗಳು ಕೇಳಿಬಂದಾಗ ತುಂಬಾ ನೋವಾಗುತ್ತದೆ. ನಾವು ನಮ್ಮ ಹೆಸರುಗಳನ್ನು ಗೂಗಲ್ ಮಾಡಿ ಓದುವುದನ್ನು ನಿಲ್ಲಿಸಿದ್ದೇವೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲಾ ಸಾಮಾನ್ಯ ಎಂದು ಸುಮ್ಮನಾಗುತ್ತೇವೆ ಎನ್ನುತ್ತಾರೆ.