ಪಾಕ್, ಬಾಂಗ್ಲಾ ಗಡಿ ಪ್ರದೇಶದಲ್ಲಿ ಶೀಘ್ರವೆ ಗಸ್ತು ಮುಕ್ತ ಸ್ಮಾರ್ಟ್ ಬೇಲಿ: ಬಿಎಸ್ ಎಫ್
ನವದೆಹಲಿ: ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಿಗೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ 2017ರ ಅಂತ್ಯಕ್ಕೆ ಗಸ್ತು ಮುಕ್ತ ಸ್ಮಾರ್ಟ್ ಬೇಲಿ ನಿರ್ಮಾಣವಾಗಲಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಸ್ಮಾರ್ಟ್ ಬೇಲಿ ನಿರ್ಮಾಣಕ್ಕಾಗಿ ಈಗಾಗಲೇ ಜಾಗತಿಕ ಮಟ್ಟದ 20 ಕಂಪನಿಗಳು ತಾಂತ್ರಿಕ ಪರಿಶೀಲನೆ ನಡೆಸಿವೆ. ಕಾಂಪ್ರಹೆನ್ಸಿವ್ ಇಂಟಿಗ್ರೇಟೆಡ್ ಬಾರ್ಡರ್ ನಿರ್ವಹಣಾ ವ್ಯವಸ್ಥೆಗೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ಸೂಚಿಸಿದ್ದು ಕಾಮಗಾರಿಗಳು ಜಾರಿಯ ಹಂತದಲ್ಲಿದೆ ಎಂದು ಬಿಎಸ್ಎಫ್ ನ ಪ್ರಧಾನ ನಿರ್ದೇಶಕ ಕೆಕೆ ಶರ್ಮಾ ಮಾಹಿತಿ ನೀಡಿದ್ದಾರೆ.
ಗಡಿ ಭಾಗದಲ್ಲಿ ಸ್ಮಾರ್ಟ್ ಬೇಲಿ ನಿರ್ಮಾಣ ಮಾಡುವುದರಿಂದ ಯೋಧರು ಸಾಮಾನ್ಯವಾಗಿ ಈಗ ಗಸ್ತು ತಿರುಗುವ ಅಗತ್ಯತೆ ಕಡಿಮೆಯಾಗಲಿದ್ದು, ಗ್ರಿಡ್ ಎಚ್ಚರಿಕೆ ನೀಡಲಿದ್ದು ಉಳಿದ ಗ್ರಿಡ್ ಗಳಿಗೂ ಮಾಹಿತಿ ರವಾನೆ ಮಾಡಲಿದ್ದು ನುಸುಳುವವರ ವಿರುದ್ಧ ದಾಳಿ ನಡೆಸಲು ಯೋಧರಿಗೆ ಮಾಹಿತಿ ಸಿಗಲಿದೆ.
ಪ್ರಾಯೋಗಿಕವಾಗಿ ಜಮ್ಮು, ಪಂಜಾಬ್, ಗುಜರಾತ್ ನ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ರಹಿತ ಸ್ಮಾರ್ಟ್ ಬೇಲಿ ನಿರ್ಮಾಣ ಮಾದಲಾಗುತ್ತಿದೆ. ಪಠಾಣ್ ಕೋಟ್ ವಾಯು ನೆಲೆ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರ ನೇತೃತ್ವದ ಸಮಿತಿ ರಚಿಸಿ, ಗಡಿಪ್ರದೇಶದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕೈಗೊಳ್ಳಬೇಕಿರುವ ಕ್ರಮಗಳಿಗೆ ಸಲಹೆ ನೀಡಲು ಸೂಚಿಸಿತ್ತು. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಗಡಿ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಸಿಬ್ಬಂದಿಗಳನ್ನು ನಿಯೋಜಿಸುವುದು ಸಮಿತಿಯ ಶಿಫಾರಸ್ಸುಗಳಲ್ಲಿ ಒಂದಾಗಿದೆ.