ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಳಸುತ್ತಿದ್ದ ಅಧಿಕೃತ ಟ್ವಿಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಆಕ್ಷೇಪಾರ್ಹ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಕಾಂಗ್ರೆಸ್ ಪಕ್ಷದ ಕುರಿತಾಗಿ ಅವಹೇಳನಕಾರಿ ಸಂದೇಶಗಳನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಖಾತೆಯ ಹೆಸರನ್ನು ಕೂಡ ಬದಲಿಸಿದ್ದಾರೆ.
ನಮ್ಮದು ದೊಡ್ಡ ತಂಡವಾಗಿದ್ದು, ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುತ್ತೇವೆಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು 1.25 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದು, ಟ್ವಿಟರ್ ಖಾತೆಯನ್ನು ಬುಧವಾರ ರಾತ್ರಿ ಹ್ಯಾಕ್ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ರದ್ದು ಕ್ರಮವನ್ನು ವಿರೋಧಿಸುತ್ತಿರುವುದಕ್ಕಾಗಿ ರಾಹುಲ್ ವಿರುದ್ಧ ಹ್ಯಾಕರ್ ಗಳು ಕೆಂಡಕಾರಿದ್ದಾರೆ. ಹ್ಯಾಕರ್‌ಗಳು ಸರಣಿ ಟ್ವೀಟ್ ಗಳನ್ನು ಪ್ರಕಟಿಸುತ್ತಿದ್ದು, ಹ್ಯಾಕರ್‌ಗಳು ಮಾಡುತ್ತಿರುವ ಟ್ವಿಟ್‌ಗಳನ್ನು ಖಾತೆಯಿಂದ ತೆಗೆದು ಹಾಕುವ ಪ್ರಯತ್ನ ಮಾಡಲಾಗುತ್ತಿದೆ.
ಟ್ವಿಟರ್ ಖಾತೆ ಹ್ಯಾಕ್ ಸಂಬಂಧ ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.