ಟೊರೊಂಟೊ: ಪಾಕಿಸ್ತಾನದೊಂದಿಗೆ ಇತ್ತೀಚಿನ ಆತಂಕ, ವಿವಾದಗಳಿಂದ ಭಾರತದ ಆರ್ಥಿಕ ಸ್ಥಿತಿಗತಿ ಮೇಲೆ ಅತ್ಯಂತ ಕನಿಷ್ಠ ಪರಿಣಾಮ ಬೀರುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೊರಂಟೋ ವಿಶ್ವವಿದ್ಯಾಲಯದ ರೊಟ್ಮಾನ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿಗಳಿಂದ ಯಾವುದೇ ಪರಿಣಾಮ ಬೀರಿದ್ದರೂ ಕೂಡ ಅದು ತಾತ್ಕಾಲಿಕವಷ್ಟೆ. ಭಾರತಕ್ಕೆ ಹರಿದುಬರುವ ವಿದೇಶಿ ನೇರ ಬಂಡವಾಳ ಹೂಡಿಕೆ ಇನ್ನಷ್ಟು ವೃದ್ಧಿಯಾಗುತ್ತದೆ ಎಂದರು.
ಪಾಕ್ ಆಕ್ರಮಿತ ಗಡಿ ಭಾಗದಲ್ಲಿ ಭಾರತದ ಗಡಿಯೊಳಗೆ ಪ್ರವೇಶಿಸಲು ಭಯೋತ್ಪಾದಕರು ಬಳಸುತ್ತಿದ್ದ ಲಾಂಚ್ ಪಾಡ್ ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದರಿಂದ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಬಹುದು, ಆರ್ಥಿಕವಾಗಿ ನಷ್ಟವುಂಟಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿದ್ದವು. ಆದರೆ ಹಲವು ವರ್ಷಗಳ ಹಿಂದೆ ಆದಷ್ಟು ಪರಿಣಾಮ ಈಗ ಬೀರಿಲ್ಲ ಎಂದು ಹೇಳಿದರು.
ಭಾರತೀಯ ಸೇನೆ ವಾರದ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇರುವ ಏಳು ಭಯೋತ್ಪಾದಕ ಲಾಂಚ್ ಪಾಡ್ ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಭಾರತ-ಪಾಕಿಸ್ತಾನ ನಡುವಣ ಸಂಬಂಧ ಇನ್ನಷ್ಟು ಹದಗೆಟ್ಟಿದೆ ಎನ್ನಬಹುದು. ಭಯೋತ್ಪಾದಕರು ಭಾರತದೊಳಗೆ ನುಸುಳಲು ಹೊಂಚು ಹಾಕುತ್ತಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕರು ಕಾಶ್ಮೀರದ ಉರಿಯಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಸೈನಿಕರನ್ನು ಕೊಂದ ನಂತರ ಭಾರತ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.
ಆದರೆ ಪಾಕಿಸ್ತಾನ ಭಾರತದ ಸರ್ಜಿಕಲ್ ಸ್ಟ್ರೈಕ್ ನ್ನು ನಿರಾಕರಿಸಿದ್ದು, ಅದನ್ನು ಗಡಿಯಾಚೆಗಿನ ಗುಂಡಿನ ದಾಳಿ ಎಂದು ಹೇಳಿದೆ.