ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅನಾರೋಗ್ಯ ಕುರಿತಂತೆ ಬುಧವಾರ ಮಾಹಿತಿ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಜಯಲಲಿತಾ ಅವರ ಅನಾರೋಗ್ಯ ಸಂಬಂಧ ಮಾಹಿತಿ ನೀಡುವಂತೆ ಕೋರಿ ಟ್ರಾಫಿಕ್ ರಾಮಸ್ವಾಮಿ ಎಂಬುವವರು ನಿನ್ನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಾಲಯ, ನಾಳೆಯೊಳಗೆ ಜಯಲಲಿತಾ ಆನಾರೋಗ್ಯದ ಕುರಿತು ಮಾಹಿತಿ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.
ಟ್ರಾಫಿಕ್ ರಾಮಸ್ವಾಮಿ ಎಂಬುವವರು ಸಲ್ಲಿಸಿದ್ದ ಅರ್ಜಿಯಲ್ಲಿ "ತಮಿಳುನಾಡು ಸರ್ಕಾರ ಜಯಲಲಿತಾ ಅವರ ಆನಾರೋಗ್ಯ ಸಂಬಂಧ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ. ಸರ್ಕಾರದ ಈ ನಡೆ ಜನೆತೆಯಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದ್ದು, ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಿಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಹಿನ್ನಲೆಯಲ್ಲಿ ಕೂಡಲೇ ಸರ್ಕಾರ ಜಯಾ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ನಾಳೆಯೊಳಗೆ ಮಾಹಿತಿ ನೀಡುವಂತೆ ಇಂದು ಆದೇಶಿಸಿದೆ.
ದೇಹದ ನಿರ್ಜಲೀಕರಣ ಹಾಗೂ ತೀವ್ರ ಬಳಲಿಕೆಯಿಂದಾಗಿ ತಮಿಳುನಾಡು ಸಿಎಂ ಜೆ ಜಯಲಲಿತಾ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ಜಯಾ ಆಪ್ತರಿಗಷ್ಟೇ ಆಸ್ಪತ್ರೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದ್ದು, ಆಸ್ಪತ್ರೆ ಸುತ್ತ ಮೂರು ಸುತ್ತಿನ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.