ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳ ನಡುವಣ ಉದ್ವಿಗ್ನ ಪರಿಸ್ಥಿತಿ ವಾಸ್ತವ ಜಗತ್ತನ್ನು ಮೀರಿ ದಾಟಿದ್ದು, ಹ್ಯಾಕರ್ ಗಳು ಸರ್ಕಾರಿ ವೆಬ್ ಸೈಟ್ ಗಳನ್ನು ಗುರಿಯಾಗಿಟ್ಟುಕೊಂಡು ಜನರ ಉದ್ವೇಗ ಮತ್ತು ದೋಷಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಭಾರತ-ಪಾಕಿಸ್ತಾನಗಳ ನಡುವಣ ಸಂಘರ್ಷ ಸಂದರ್ಭದಲ್ಲಿ ಸುಳ್ಳು ಮಾಹಿತಿ ಹಬ್ಬಿಸಲು, ಅಪಪ್ರಚಾರ ಮಾಡಲು ಅಥವಾ ಅಧಿಕಾರಿಗಳನ್ನು ಅಪಹಾಸ್ಯ ಮಾಡಲು ಹ್ಯಾಕರ್ ಗಳು ವೆಬ್ ಸೈಟ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಸೈಬರ್ ತಜ್ಞರೊಬ್ಬರು, ಭಾರತ-ಪಾಕಿಸ್ತಾನ ನಡುವಣ ಸೈಬರ್ ಕದನ 2010ರಲ್ಲಿಯೇ ಆರಂಭವಾಗಿತ್ತು. ವೆಬ್ ಸೈಟ್ ಹ್ಯಾಕರ್ ಗಳ ಮುಖ್ಯ ಗುರಿ ಸರ್ಕಾರಿ ವೆಬ್ ಸೈಟ್ ಗಳಾಗಿದ್ದವು. ಉದಾಹರಣೆಗೆ ಆಗಸ್ಟ್ 15ರಂದು ಭಾರತೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಆಚರಿಸುವ ಸಂದೇಶಗಳನ್ನು ಹರಿಯಬಿಡಲಾಗುತ್ತಿತ್ತು. ಅದಕ್ಕೆ ತದ್ವಿರುದ್ದವಾಗಿ ಪಾಕಿಸ್ತಾನಿ ವೆಬ್ ಸೈಟ್ ಗಳನ್ನು ಕೂಡ ಮಾಡಲಾಗುತ್ತಿತ್ತು.ಇದು ಎರಡು ರಾಷ್ಟ್ರಗಳ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿಯೂ ಕಾಣುತ್ತಿತ್ತು. ಈ ಪರಿಸ್ಥಿತಿ ಇಂದು ಕೂಡ ಮುಂದುವರಿದಿದೆ. ಭಾರತದ ಇತ್ತೀಚಿನ ಸರ್ಜಿಕಲ್ ಸ್ಟ್ರೈಕ್, ಗಡಿ ನಿಯಂತ್ರಣ ರೇಖೆ ಬಳಿ ಕದನ, ಗುಂಡಿನ ಚಕಮಕಿ ಇತ್ಯಾದಿಗಳ ನಂತರ ಇದು ಇನ್ನೂ ಹೆಚ್ಚಾಗಿದೆ.
ಹ್ಯಾಕರ್ ಗಳು ವೆಬ್ ಸೈಟ್ ಗಳನ್ನು ನಿಂದನಾ ಸಂದೇಶಗಳಿಂದ ವಿರೂಪಗೊಳಿಸುತ್ತಾರೆ. ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ, ರಾಷ್ಟ್ರೀಯ ಹಸಿರು ಪ್ರಾಧಿಕಾರದ ವೆಬ್ ಸೈಟ್ ನ್ನು ಹ್ಯಾಕ್ ಮಾಡಲಾಗಿತ್ತು. ನಂತರ ಮುಂಬೈ ಕಾನೂನು ಕಾಲೇಜು ಮತ್ತು ಗಾಂಧಿನಗರದ ಖಾಸಗಿ ಕಾಲೇಜಿನ ವೆಬ್ ಸೈಟ್ ಗಳು ಕೂಡ ಹ್ಯಾಕ್ ಆಗಿದ್ದವು. ಪಾಕಿಸ್ತಾನದವರು ಎಂದು ಹೇಳಿಕೊಂಡಿರುವ ಹ್ಯಾಕರ್ ಗಳು ಭಾರತದ ಸರ್ಜಿಕಲ್ ಸ್ಟ್ರೈಕ್ ನ್ನು ಅವಮಾನ ಮಾಡಿ ಸಂದೇಶ ಹಾಕಿದ್ದಾರೆ. ಇದು ಭಾರತದ ಸರ್ಜಿಕಲ್ ಸ್ಟ್ರೈಕ್ ಗೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಲಾಗಿದೆ ಎಂದು ಹ್ಯಾಕರ್ ಗಳು ಹೇಳಿಕೊಂಡಿದ್ದಾರೆ.
ಸರ್ಕಾರಿ ಸಂಸ್ಥೆಯಾದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ ಹಿರಿಯ ಅಧಿಕಾರಿ, ಇಂತಹ ಸಾಮೂಹಿಕ ಸೈಬರ್ ದಾಳಿಯಾದ ಸಂದರ್ಭದಲ್ಲಿ ಮಾಹಿತಿಯನ್ನು ಎಲ್ಲಾ ಸಂಸ್ಥೆಗಳು ಮತ್ತು ಐಟಿ ಕಂಪೆನಿಗಳಿಗೆ ರವಾನಿಸಿ ಹೆಚ್ಚು ಜಾಗೃತರಾಗಿರುವಂತೆ ಸೂಚನೆ ನೀಡುತ್ತೇವೆ ಎನ್ನುತ್ತಾರೆ.