ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ 39 ವರ್ಷದ ವ್ಯಕ್ತಿಯೊಬ್ಬ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಚೆನ್ನೈನ ಜಿಎಸ್ ಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಆರ್ ಸರ್ಗುಣಂ ಎಂದು ಗುರುತಿಸಲಾಗಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸರ್ಗುಣಂ ನಿನ್ನೆ ಸಂಜೆ 6.15ರ ಸುಮಾರಿಗೆ ಎಂಇಪಿಝೆಡ್ ಕೈಗಾರಿಕಾ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹಚ್ಚಿಕೊಂಡ ಸರ್ಗುಣಂನನ್ನು ಸ್ಥಳೀಯರು ಕೂಡಲೇ ಕ್ರೊಂಪೆಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಾಯುವ ಮುನ್ನ ಜಯಲಲಿತಾ ಅವರ ಅನಾರೋಗ್ಯದಿಂದಾಗಿ ತಾನು ತೀವ್ರವಾಗಿ ನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಪೊಲೀಸರಿಗೆ ಪದೇಪದೆ ಹೇಳುತ್ತಿದ್ದ ಎನ್ನಲಾಗಿದೆ.
ಈ ಮಧ್ಯೆ, ಮೃತ ಸರ್ಗುಣಂ ಎಐಎಡಿಎಂಕೆ ಕಾರ್ಯಕರ್ತ ಅಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.