ಶ್ರೀನಗರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಗೆ ಭಾರತದ ಭದ್ರತೆಯ ಬಗ್ಗೆ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಜಮ್ಮು-ಕಾಶ್ಮೀರದ ಪೊಲೀಸ್ ಉಪ ವರಿಷ್ಠಾಧಿಕಾರಿಯನ್ನು ಇಲಾಖೆ ಅಮಾನತು ಮಾಡಿದೆ.
ಉಗ್ರ ಬುರ್ಹಾನ್ ವನಿ ಹತ್ಯೆ ನಂತರ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದ ವೇಳೆ ಪೊಲೀಸ್ ಇಲಾಖೆಯ ಉಪವರಿಷ್ಠಾಧಿಕಾರಿಯೊಬ್ಬ ಪಾಕಿಸ್ತಾನಕ್ಕೆ ಭದ್ರತೆಯ ಬಗ್ಗೆ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಡಿಜಿಪಿ ರಾಜೇಂದ್ರ ಕುಮಾರ್ ಉಪವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.
ಸಶಸ್ತ್ರ ಪೊಲೀಸ್ ನಿಯಂತ್ರಣ ಕೊಠಡಿಯ ಡಿಎಸ್ ಪಿ ಆಗಿದ್ದ ತನ್ವೀರ್ ಅಹ್ಮದ್ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ದೇಶದ ಆಂತರಿಕ ಭದ್ರತೆ ವಿಷಯಗಳ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದದ್ದನ್ನು ಕೇಂದ್ರ ಗೃಹ ಇಲಾಖೆ ಗಮನಿಸಿದೆ. ಈ ಬಗ್ಗೆ ಜಮ್ಮು-ಕಾಶ್ಮೀರದ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಗೃಹ ಇಲಾಖೆ ಮಾಹಿತಿಯನ್ನು ಆಧರಿಸಿ ಜಮ್ಮು-ಕಾಶ್ಮೀರ ಪೊಲೀಸರು ಪಾಕ್ ಗೆ ಭಾರತದ ಗೌಪ್ಯ ಮಾಹಿತಿಯನ್ನು ರವಾನೆ ಮಾಡುತ್ತಿದ್ದ ಅಧಿಕಾರಿ ತನ್ವೀರ್ ಅಹ್ಮದ್ ನನ್ನ ಅಮಾನತುಗೊಳಿಸಲಾಗಿದೆ.
ಆದರೆ ತನ್ವೀರ್ ಅಹ್ಮದ್ ಬೇರೆಯದೇ ಮಾಹಿತಿ ನೀಡುತ್ತಿದ್ದು, ವ್ಯಕ್ತಿಯೋರ್ವ ಆರ್ಮಿ ಕಮಾಂಡರ್ ಎಂದು ಪರಿಚಯಿಸಿಕೊಂಡು ಪೊಲೀಸ್ ಸಿಬ್ಬಂದಿ ನಿಯೋಜನೆ, ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಆದ್ದರಿಂದ ಎಸ್ ಪಿ ಅನುಮತಿ ಪಡೆದು ನಾನು ಮಾಹಿತಿ ನೀಡಿದ್ದೆ ಎಂದು ಹೇಳಿದ್ದಾರೆ.