ದೇಶ

ಒಡಿಶಾ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 23 ಮಂದಿ ಸಾವು, ಹಲವರಿಗೆ ಗಾಯ

Manjula VN

ನವದೆಹಲಿ: ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಪರಿಣಾಮ 23 ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕಳೆದ ರಾತ್ರಿ 7.30ರ ಸುಮಾರಿಗೆ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಕೆನ್ನಾಲಿಗೆ ತುರ್ತು ಚಿಕಿತ್ಸಾ ಫಟಕಕ್ಕೂ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹೆದರಿದ ರೋಗಿಗಳು, ದಾದಿಯರು ಹಾಗೂ ಇನ್ನಿತರೆ ಸಿಬ್ಬಂದಿ ವರ್ಗದವರು ದಿಕ್ಕಾಪಾಲಾಗಿ ಓಡಿದ್ದಾರೆ.

ಸ್ಥಳಕ್ಕಾಗಮಿಸಿರುವ 24ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ.

ಎಎಂಆರ್ ಒಡೆತನಕ್ಕೆ ಸೇರಿದ ಎಸ್ ಯುಎಂ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಅಗ್ನಿ ದುರಂತ ನಡೆದ ಸಂದರ್ಭದಲ್ಲಿ 2ನೇ ಮಹಡಿಯಲ್ಲಿ ಸಾಕಷ್ಟು ಹೆಚ್ಚು ರೋಗಿಗಳಿದ್ದರು. ನಡೆಯಲು ಹಾಗೂ ಓಡಲು ಸಾಧ್ಯವಾಗದ ಕೆಲ ರೋಗಿಗಳು, ವೃದ್ಧರು ಅಸಹಾಯಕ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಧಾವಿಸಿದ 100 ಹೆಚ್ಚು ಅಗ್ನಿ ಶಾಮಕ ದಳ ಸಿಬ್ಬಂದಿಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿ ರೋಗಿಗಳನ್ನು ರಕ್ಷಿಸಿದ್ದಾರೆ. ಬೆಂಕಿಯ ಎರಡನೇ ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದರಿಂದ ಬೆಂಕಿಯ ಕೆನ್ನಾಲಿಗೆ ಹಾಗೂ ದಟ್ಟ ಹೊಗೆಯ ನಡುವೆ ರೋಗಿಗಳನ್ನು ಕೆಳಗೆ ಇಳಿಸಿಕೊಂಡು ಬರುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಸಿಬ್ಬಂದಿಗಳು ಕಿಟಕಿ ಗಾಜುಗಳನ್ನು ಒಡೆದು ರೋಗಿಗಳನ್ನು ರಕ್ಷಣೆ ಮಾಡಲು ಆರಂಭಿಸಿದರು. ಕ್ರೇನ್ ಬಳಸಿ ರೋಗಿಗಳನ್ನು ಕೆಳಗೆ ಇಳಿಸಲಾಯಿತು.

ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿತು ದುರಂತ?
ಡಯಾಲಿಸಿಸ್ ವಾರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

2011ರಲ್ಲಿಯೂ ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ ಇಂಥದ್ದೇ ಘಟನೆಯೊಂದು ನಡೆದಿತ್ತು. ಅಂದು ಸಂಭವಿಸಿದ ಅಗ್ನಿ ದುರಂತದಲ್ಲಿ ರೋಗಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು.

SCROLL FOR NEXT