ದೇಶ

ರಾಹುಲ್ ಗಾಂಧಿಯನ್ನು ಕತ್ತೆಯೆಂದು ಕರೆದ ಕಾಂಗ್ರೆಸ್ ಶಾಸಕ ಅಮಾನತು

Manjula VN

ರಾಯ್ಪುರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಹಿರಂಗವಾಗಿಯೇ 'ಕತ್ತೆ" ಎಂದು ಕರೆದಿದ್ದ ಕಾಂಗ್ರೆಸ್ ಬಂಡಾಯ ಶಾಸಕ ಆರ್.ಕೆ. ರಾಯ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ನಿನ್ನೆ ನಡೆದ ಛತ್ತೀಸ್'ಗಢ ಕಾಂಗ್ರೆಸ್ ಉನ್ನತಾಧಿಕಾರಿಗಳ ಸಮಿತಿ ಸಭೆ ಈ ನಿರ್ಧಾರವನ್ನು ಕೈಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆಂದು ಹೇಳಿ ರಾಯ್ ಅವರನ್ನು ಅಮಾನತುಗೊಳಿಸಿದೆ.

ಕಾಂಗ್ರೆಸ್ ನಾಯಕರ ಈ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಯ್ ಅವರು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾಯಕರ ನಿರ್ಧಾರದಿಂದ ನನಗೆ ಬೇಸರವಾಗುತ್ತಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ಪಕ್ಷದ ಅಮಾನತಿನಿಂದಾಗಿ ಇದೀಗ ನಾನು ಸ್ವತಂತ್ರಗೊಂಡಿದ್ದೇನೆಂದು ಹೇಳಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದರೆ ಪಕ್ಷದಿಂದ ಹೊರಹಾಕುತ್ತಾರೆಂದು ಈ ಹಿಂದೆ ಕೂಡ ನಾನು ಹೇಳಿಕೆ ನೀಡಿದ್ದೆ. ರಾಹುಲ್ ಹಾಗೂ ಅವರ ದೃಷ್ಟಿಕೋನ ಮತ್ತವರ ನಾಯಕತ್ವದ ವಿರುದ್ಧ ನಾನು ಮಾತನಾಡಿದ್ದೇನೆ. ಇದೀಗ ನನ್ನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ಕ್ರಮಕೈಗೊಳ್ಳುತ್ತದೆಂಬ ಕಾರಣಕ್ಕೆ ಕತ್ತೆಯನ್ನು ಕುದುರೆಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನ ಪ್ರಕಾರ ಕತ್ತೆ ಎಂದರೆ ಕತ್ತೆಯೇ, ಕುದುರೆ ಎಂದರೆ ಕುದುರೆಯೇ.

ನನ್ನ ಆಲೋಚನೆ ತಪ್ಪು ಎಂದಾದಾರೆ, ಪಕ್ಷ ಅಂಧತ್ವದಲ್ಲಿರಬೇಕು ಇಲ್ಲವೇ, ನಿರ್ಧಾರ ಕೈಗೊಂಡ ನಾಯಕರು ಅಂಧತ್ವದಲ್ಲಿರಬೇಕು. ನಾನೊಬ್ಬ ಮುಕ್ತವಾಗಿ ಮಾತನಾಡುವ ಮನುಷ್ಯನಾಗಿದ್ದು, ಬುಡಕಟ್ಟು ಜನರ ಪ್ರತಿನಿಧಿಯಾಗಿದ್ದೇನೆ. ಕಾಂಗ್ರೆಸ್ ನ ಈ ನಿರ್ಧಾರ ಬುಡಕಟ್ಟು ಜನರ ಮೇಲಿರುವ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT