ದೇಶ

ಕೇರಳದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Srinivas Rao BV

ತ್ರಿಶೂರ್: ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿ ಮುಂದುವರೆದಿದ್ದು, ಅ.21 ರಂದು ತ್ರಿಶೂರಿನಲ್ಲಿ ಓರ್ವ ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ ನಡೆದಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಕಾರ್ಯಕರ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಿಜೆಪಿ ತನ್ನ ಕಾರ್ಯಕರ್ತನ ಮೇಲೆ ನಡೆದಿರುವ ದಾಳಿಗೆ ಸಿಪಿಐ(ಎಂ) ಪಕ್ಷವನ್ನು ದೂಷಿಸಿದೆ. ಕೇರಳದಲ್ಲಿ ಬಿಜೆಪಿ, ಸಿಪಿಐ(ಎಂ) ಕಾರ್ಯಕರ್ತರ ನಡುವಿನ ಘರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೇರಳ ವಿಧಾನಸಭೆಯಲ್ಲಿ ಕಳೆದ ವಾರ ನಿಲುವಳಿ ಸೂಚನೆ ಮಂಡಿಸಿತ್ತು.
ಕೇರಳದ ಪ್ರಧಾನ ವಿರೋಧಪಕ್ಷವಾಗಿರುವ ಕಾಂಗ್ರೆಸ್, ಬಿಜೆಪಿ- ಕಮ್ಯುನಿಷ್ಟ್ ಸಂಘಟನೆಯ ಕಾರ್ಯಕರ್ತರ ನಡುವಿನ ಮಾರಾಮಾರಿ, ಹತ್ಯೆಗಳಿಂದಾಗಿ ಕೇರಳ ಹತ್ಯಾಕಾಂಡದ ರಾಜಧಾನಿಯಾಗುತ್ತಿದೆ ಎಂದು ಆರೋಪಿಸಿದೆ. ಆದರೆ ಕಾಂಗ್ರೆಸ್ ನ ಆರೋಪವನ್ನು ತಳ್ಳಿಹಾಕಿರುವ ಕೇರಳ ಸಿಎಂ ಪಿಣರಾಯಿ ವಿಜಯ್, ಆರ್ ಎಸ್ ಎಸ್ ಸಂಘಟನೆ ಉದ್ದೇಶಪೂರ್ವಕವಾಗಿ ಕಣ್ಣೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಯತ್ನಿಸುತ್ತಿದೆ ಶಾಂತಿ ಮಾತುಕತೆಗೆ ಕರೆದರೂ ಬಿಜೆಪಿ ಅದರಿಂದ ದೂರ ಉಳಿದಿದೆ ಎಂದು ವಿಜಯ್ ಪಿಣರಾಯಿ ಹೇಳಿದ್ದಾರೆ. ಒಂದು ತಿಂಗಳಲ್ಲಿ ಕಣ್ಣೂರಿನಲ್ಲಿ ಬಿಜೆಪಿ ಹಾಗೂ ಸಿಪಿಐ(ಎಂ) ನ ತಲಾ ಒಬ್ಬರು ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ.

SCROLL FOR NEXT