ವಡೋದರದ ಹರ್ನಿಯಲ್ಲಿ ಅಂತಾರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ
ವಡೋದರ: ವಾಯು ಯಾನ ವಲಯದ ವಿಸ್ತೀರ್ಣಕ್ಕೆ ತಮ್ಮ ಸರ್ಕಾರ ಪ್ರಚಾರ ಮಾದರಿ(ಮಿಷನ್ ಮೋಡ್)ಯಲ್ಲಿ ಕೆಲಸ ಮಾಡುತ್ತಿದೆ. ಸಣ್ಣ ನಗರಗಳ ಸಾಮರ್ಥ್ಯವನ್ನು ಹೆಚ್ಚಿಸಲು ದೇಶದ ಮೊದಲ ಆಂತರಿಕ ವಿಮಾನ ಯೋಜನೆಯನ್ನು ತಮ್ಮ ಸರ್ಕಾರ ಜಾರಿಗೆ ತರುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನ ವಡೋದರದಲ್ಲಿ ಹರ್ನಿ ಅಂತಾರಾಷ್ಟ್ರೀಯ ಸಂಯೋಜಿತ ಹಸಿರು ವಿಮಾನ ನಿಲ್ದಾಣವನ್ನು ದೇಶಕ್ಕೆ ಸಮರ್ಪಿಸಿ ಮಾತನಾಡಿದ ಅವರು, ಜಗತ್ತಿನಲ್ಲಿಯೇ ವೈಮಾನಿಕ ವಲಯದಲ್ಲಿ ನಮ್ಮ ದೇಶ ಗುರುತಿಸಿಕೊಳ್ಳಲಿದೆ. ಕೇವಲ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಮಾತ್ರವಲ್ಲದೆ ಟಯರ್ 2 ಮತ್ತು ಟಯರ್ 3 ನಗರಗಳನ್ನು ಮೈಮಾನಿಕ ವಲಯಕ್ಕೆ ಅಳವಡಿಸಿಕೊಂಡರೆ ಮಾತ್ರ ದೇಶದ ಪ್ರಗತಿ ಸಾಧ್ಯ. ದೇಶದಲ್ಲಿ ಕಾರ್ಯನಿರ್ವಹಿಸದಿರುವ ವಾಯುನೆಲೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಗುರುತಿಸಿ ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಹೇಳಿದರು.
ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಸ್ಥಳೀಯ ಸಂಪರ್ಕ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದರಡಿ 500 ಕಿಲೋ ಮೀಟರ್ ಅಂತರದವರೆಗೆ ಕೇವಲ 2 ಸಾವಿರದ 500 ರೂಪಾಯಿಗಳಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು. ಇದನ್ನು ವಾಯುಯಾನ ಕಾರ್ಯನೀತಿ ಎಂದು ಕರೆಯಲಾಗುತ್ತಿದ್ದು ಸಾಮಾನ್ಯ ಜನತೆಗೆ ವಿಮಾನ ಪ್ರಯಾಣ ಕೈಗೆಟಕುವ ದರದಲ್ಲಿ ಸಿಗಬೇಕೆಂಬುದು ಇದರ ಉದ್ದೇಶವಾಗಿದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಿ ಆರ್ಥಿಕ ಪ್ರಗತಿ ಕಾಣಲಿದೆ ಎಂದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಒಕ್ಕೂಟದ ಪ್ರಕಾರ, 2035ರ ಹೊತ್ತಿಗೆ ಸುಮಾರು 322 ದಶಲಕ್ಷ ಪ್ರಯಾಣಿಕರು ವಿಮಾನದಲ್ಲಿ ಸಂಚರಿಸಲಿದ್ದಾರೆ. 2026 ಹೊತ್ತಿಗೆ ಇಂಗ್ಲೆಂಡ್ ನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಮೂರನೇ ವೈಮಾನಿಕ ಮಾರುಕಟ್ಟೆಯಾಗಿ ಭಾರತ ಬೆಳೆಯಲಿದೆ. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ 21.6ರಷ್ಟು ಬೆಳವಣಿಗೆಯಾಗಿದೆ ಎಂದು ಮೋದಿ ಹೇಳಿದರು.