ಉಚಿತ ವೈಫೈ ದುರ್ಬಳಕೆ ತಡೆಯಲು ಅಶ್ಲೀಲ ತಾಣಗಳಿಗೆ ನಿರ್ಬಂಧ ವಿಧಿಸಿದ ರೈಲ್ವೆ
ಪಾಟ್ನಾ ರೈಲು ನಿಲ್ದಾಣದಲ್ಲಿ ದೇಶದ ಇತರೆ ರೈಲು ನಿಲ್ದಾಣಗಳಿಗಿಂತಲೂ ಅತಿ ಹೆಚ್ಚು ಉಚಿತ ವೈಫೈ ಸವಲತ್ತನ್ನು ಬಳಸಲಾಗುತ್ತಿದ್ದು,...
ಪಾಟ್ನಾ: ಪಾಟ್ನಾ ರೈಲು ನಿಲ್ದಾಣದಲ್ಲಿ ದೇಶದ ಇತರೆ ರೈಲು ನಿಲ್ದಾಣಗಳಿಗಿಂತಲೂ ಅತಿ ಹೆಚ್ಚು ಉಚಿತ ವೈಫೈ ಸವಲತ್ತನ್ನು ಬಳಸಲಾಗುತ್ತಿದ್ದು, ಬಹುತೇಕ ಮಂದಿ ವೈಫೈ ಬಳಸಿ ಅಶ್ಲೀಲ ಜಾಲತಾಣಗಳಿಗಾಗಿ ಜಾಲಾಡಿದ ಸಂಗತಿ ಬಹಿರಂಗಗೊಂಡ ನಂತರ ರೈಲ್ವೆ ಇಲಾಖೆ ಅಶ್ಲೀಲ ವೆಬ್ ಸೈಟ್ ಗಳಿಗೆ ನಿರ್ಬಂಧ ವಿಧಿಸಿದೆ.
ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಉಚಿತ ವೈಫೈ ಬಳಕೆದಾರರು ಅಶ್ಲೀಲ ವೆಬ್ ಸೈಟ್ ವೀಕ್ಷಿಸದಂತೆ ಸೋಮವಾರದಿಂದ ನಿರ್ಬಂಧ ವಿಧಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಉಚಿತ ವೈಫೈ ಸವಲತ್ತು ಕಲ್ಪಿಸಲಾಗಿರುವ ದೇಶದ ಇತರೆ ಯಾವುದೇ ರೈಲ್ವೆ ನಿಲ್ದಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಟನಾದಲ್ಲಿ ವೈ ಫೈ ಸವಲತ್ತು ಬಳಸಿ ಜನ ಅಂತರ್ಜಾಲವನ್ನು ಜಾಲಾಡುತ್ತಾರೆ. ಪಟನಾ ಈ ವಿಷಯದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಆದರೆ ಇಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾಲ ಜಾಲಾಟ ನಡೆಯುವುದು ಅಶ್ಲೀಲ ಜಾಲತಾಣಗಳಿಗಾಗಿ ಎಂದು ಇತ್ತೀಚಿಗೆ ರೈಲ್ ಟೆಲ್ ಅಧಿಕಾರಿ ಹೇಳಿದ್ದರು.
ರೈಲು ನಿಲ್ದಾಣಗಳಲ್ಲಿ ಒದಗಿಸಲಾಗಿರುವ ಉಚಿತ ವೈಫೈ ಬಳಸಿ ಅಂತರ್ಜಾಲ ಜಾಲಾಡುವಿಕೆಯಲ್ಲಿ ಎರಡನೇ ಸ್ಥಾನದಲ್ಲಿ ಜಬಲ್ಪುರ ರೈಲ್ವೇ ನಿಲ್ದಾಣವಿದ್ದು, ಬೆಂಗಳೂರು ಮತ್ತು ದೆಹಲಿ ರೈಲು ನಿಲ್ದಾಣ ಮೂರನೇ ಸ್ಥಾನದಲ್ಲಿವೆ.
ಪಟನಾ ರೈಲು ನಿಲ್ದಾಣ ವೈಫೈ ಸವಲತ್ತು ಪಡೆದ ದೇಶದ ಮೊತ್ತ ಮೊದಲ ರೈಲು ನಿಲ್ದಾಣ. ರೈಲು ನಿಲ್ದಾಣಗಳಲ್ಲಿ ಆಪ್ಗಳು ಮತ್ತು ಬಾಲಿವುಡ್ ಚಿತ್ರಗಳನ್ನು ಡೌನ್ಲೋಡ್ ಮಾಡಲೂ ಜನ ಉಚಿತ ವೈಫೈಯನ್ನು ಬಳಸುತ್ತಾರೆ ಎಂದು ಅಧಿಕಾರಿ ತಿಳಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.