ದೇಶ

ವಿಧ್ವಂಸಕ ಕೃತ್ಯವೆಸಗಲು ಭಾರೀ ಸಂಚು: ಪಂಜಾಬ್ ಪ್ರವೇಶಿಸಿದ ಬಬ್ಬರ್ ಖಾಲ್ಸಾ ಉಗ್ರರು

Manjula VN

ಚಂಡೀಗಢ: ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಭಾರೀ ಸಂಚೊಂದನ್ನು ರೂಪಿಸಿದ್ದು, ಈಗಾಗಲೇ ಬಬ್ಬರ್ ಖಾಲ್ಸಾದ 12 ಉಗ್ರರು ಪಂಜಾಬ್ ರಾಜ್ಯವನ್ನು ಪ್ರವೇಶ ಮಾಡಿದ್ದಾರೆಂದು ಗುಪ್ತಚರ ಇಲಾಖೆ ಗುರುವಾರ ಎಚ್ಚರಿಕೆ ನೀಡಿದೆ.

ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು, ಈಗಾಗಲೇ ಪಂಜಾಬ್ ನಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆಂದು ಹೇಳಲಾಗುತ್ತಿದೆ.

ಅಕ್ಟೋಬರ್ 23 ರಂದು ಪಂಜಾಬ್ ನಲ್ಲಿ ಕಮಲ್ ದೀಪ್ ಸಿಂಗ್ ಎಂಬ ಶಂಕಿತ ಉಗ್ರನನ್ನು ಬಂಧನಕ್ಕೊಳಪಡಿಸಲಾಗಿತ್ತು. ಬಂಧಿತ ಶಂಕಿತ ಉಗ್ರ ಕಾಶ್ಮೀರ ಮೂಲದವನಾಗಿದ್ದು, ಈತ ಬಬ್ಬರ್ ಖಾಲ್ಸಾ ಉಗ್ರ ಸಂಘಟನೆಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದ.

ಕಮಲ್ ದೀಪ್ ನನ್ನು ಬಂಧನಕ್ಕೊಳಪಡಿಸುತ್ತಿದ್ದಂತೆಯೇ, ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿದ್ದು, ರಾಜ್ಯದಲ್ಲಿ ನಡೆಯಲಿರುವ ಚುನಾವಣಾ ಪ್ರಕ್ರಿಯೆ ವೇಳೆ ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

ಈಗಾಗಲೇ ಪಂಜಾಬ್ ಪ್ರವೇಶಿಸಿರುವ ಉಗ್ರರು, ಭಾರೀ ಶಸ್ತ್ರಾಸ್ತ್ರಗಳನ್ನು ಹಾಗೂ ಸ್ಫೋಟಕ ವಸ್ತುಗಳನ್ನು ಹೊತ್ತು ಬಂದಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸ್ ಡೈರೆಕ್ಟರ್ ಜನರಲ್ ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ನಡೆಸಿದ್ದು, ರಾಜ್ಯ ಹಾಗೂ ಗಡಿ ಪ್ರದೇಶಗಳಲ್ಲಿ ಶೀಘ್ರಗತಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸುವಂತೆ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

SCROLL FOR NEXT