ನಾನು ನನ್ನ ತವರಿಗೆ ಹೋಗಬೇಕು, ನನಗೆ ಅನುಮತಿ ಕೊಡಿ: ಕೇಂದ್ರ ಸರ್ಕಾರಕ್ಕೆ ಚೀನಾ ಮಾಜಿ ಯೋಧನ ಮನವಿ
1962ರ ಚೀನಾ-ಭಾರತ ಯುದ್ಧದ ಸಂದರ್ಭದಲ್ಲಿ ಹಾದಿ ತಪ್ಪಿ ಭಾರತದೊಳಗೆ ಪ್ರವೇಶಿಸಿದ್ದ ಚೀನಾದ ಮಾಜಿ ಸೈನಿಕ ಮಧ್ಯ ಪ್ರದೇಶದಲ್ಲಿದ್ದು...
ಭೋಪಾಲ್: 1962ರ ಚೀನಾ-ಭಾರತ ಯುದ್ಧದ ಸಂದರ್ಭದಲ್ಲಿ ಹಾದಿ ತಪ್ಪಿ ಭಾರತದೊಳಗೆ ಪ್ರವೇಶಿಸಿದ್ದ ಚೀನಾದ ಮಾಜಿ ಸೈನಿಕ ಮಧ್ಯ ಪ್ರದೇಶದಲ್ಲಿದ್ದು ಇದೀಗ ತಮ್ಮ ದೇಶಕ್ಕೆ ಹಿಂತಿರುಗಲು ಬಯಸುತ್ತಿದ್ದಾರೆ.
77 ವರ್ಷದ ಚೀನಾದ ಮಾಜಿ ಯೋಧ ವಾಂಗ್ ಖಿ ಲಿವ್ಸ್ ಮತ್ತು ಅವರ ಮಡದಿ, ಮಕ್ಕಳು ಮಧ್ಯ ಪ್ರದೇಶದ ಬಲಗಟ್ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದು ಕಳೆದ ಐದು ದಶಕಗಳಿಂದ ಚೀನಾದಲ್ಲಿರುವ ತಮ್ಮ ಸಹೋದರ, ಸಹೋದರಿಯರನ್ನು, ಬಂಧು ಮಿತ್ರರನ್ನು ಕಾಣುವ ತವಕದಲ್ಲಿದ್ದಾರೆ. ಆದರೆ ಅವರಿಗೆ ಚೀನಾಕ್ಕೆ ಹೋಗಲು ಭಾರತ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ.
ಭಾರತ-ಚೀನಾ ಬಾಂಧವ್ಯದಲ್ಲಿ ಕೂಡ ಗೊಂದಲ, ಆತಂಕ ಮುಂದುವರಿದಿರುವ ಮಧ್ಯೆ ವಾಂಗ್ ನಿರಾಶೆಯ ಕಂಗಳಿಂದ ತಮ್ಮ ತವರು ಮನೆಗೆ ಹೋಗಲು ತವಕಿಸುತ್ತಿದ್ದಾರೆ.
ತಮ್ಮ ತಂದೆ 1960ರಲ್ಲಿ ಚೀನಾ ಸೇನೆಯನ್ನು ಸೇರಿದ್ದರು. ಭಾರತ-ಪಾಕ್ ಯುದ್ಧದ ಸಮಯದಲ್ಲಿ ಒಂದು ದಿನ ರಾತ್ರಿ ದಟ್ಟವಾದ ಕತ್ತಲೆಯಲ್ಲಿ ಗಡಿಯ ಪೂರ್ವ ಪ್ರಾಂತ್ಯದಲ್ಲಿ ಹಾದಿ ತಪ್ಪಿ ಭಾರತವನ್ನು ಪ್ರವೇಶಿಸಿದ್ದರು. ಅವರು ಅಸ್ಸಾಂಗೆ ಹೋಗಿ ತಲುಪಿದ್ದರು. ಅವರನ್ನು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಹಿಡಿದು ಭಾರತೀಯ ಸೇನೆಗೆ 1963 ಜನವರಿ 1ರಂದು ಹಸ್ತಾಂತರಿಸಿತು ಎಂದು ವಾಂಗ್ ಅವರ ಕಿರಿಯ ಪುತ್ರ ವಿಷ್ಣು ವಾಂಗ್ ಹೇಳುತ್ತಾರೆ.
ನನ್ನ ತಂದೆ 6 ವರ್ಷಗಳ ಕಾಲ ಅಸ್ಸಾಂ, ಅಜ್ಮೀರ್, ದೆಹಲಿ, ಪಂಜಾಬ್ ನ ವಿವಿಧ ಜೈಲುಗಳಲ್ಲಿ ಕಳೆದಿದ್ದು ಹರ್ಯಾಣ ಹೈಕೋರ್ಟ್ 1969 ಮಾರ್ಚ್ ನಲ್ಲಿ ಬಿಡುಗಡೆ ಮಾಡಿತು ಎನ್ನುತ್ತಾರೆ.
ಭಾರತ ಸರ್ಕಾರ ನಮ್ಮ ತಂದೆಯವರಿಗೆ ಬದಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದೆ. ಅವರನ್ನು ದೆಹಲಿ, ಭೋಪಾಲ್, ಜಬಲ್ಪುರ್ ಮತ್ತು ಬಾಲಘಟ್ ಪೊಲೀಸರ ಬಳಿ ಕರೆದೊಯ್ಯಲಾಗಿತ್ತು. ಬಲಘಟ್ ಗೆ ಬಂದ ನಂತರ ಜೀವನೋಪಾಯಕ್ಕಾಗಿ ವಾಚ್ ಮೆನ್ ಆಗಿ ಕೆಲಸ ಮಾಡಲು ಆರಂಭಿಸಿದರು. ಅಲ್ಲಿ ಅವರನ್ನು ಅವರ ಸಹೋದ್ಯೋಗಿಗಳು ರಾಜ್ ಬಹದ್ದೂರ್ ಎಂದು ಕರೆಯಲು ಪ್ರಾರಂಭಿಸಿದರು ಎನ್ನುತ್ತಾರೆ ವಿಷ್ಣು.
ಇದೀಗ ನಮ್ಮ ತಂದೆ ಚೀನಾಕ್ಕೆ ಹೋಗಲು ಬಯಸಿದ್ದು ಭಾರತ ಸರ್ಕಾರ ಕಾನೂನಾತ್ಮಕವಾಗಿ ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡರು.