ಶ್ರೀನಗರ: ಶುಕ್ರವಾರ ಪಾರ್ಥನೆ ಹಿನ್ನೆಲೆಯಲ್ಲಿ ಕಾಶ್ಮೀರದ ಹಲವೆಡೆ ಅಧಿಕಾರಿಗಳು ಮತ್ತೆ ಕರ್ಫ್ಯೂ ಜಾರಿ ಮಾಡಿದ್ದಾರೆ.
ಬುರ್ಹಾನ್ ವಾನಿ ಹತ್ಯೆ ಖಂಡಿಸಿ 50ಕ್ಕೂ ಹೆಚ್ಚು ದಿನಗಳ ಕಾಲ ಹಿಂಸಾಚಾರ ನಡೆದಿತ್ತು. ಇಂದಿಗೂ ಕಾಶ್ಮೀರದಲ್ಲಿ ಬೂದಿ ಮುಚ್ಚಿದ ಕೆಂಡದಂತೆಯೇ ವಾತಾವರಣ ಮುಂದುವರೆದಿದೆ.
ಶುಕ್ರವಾರ ಪಾರ್ಥನೆ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತೆ ವಹಿಸಿರುವ ಅಧಿಕಾರಿಗಳು ಮತ್ತೆ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಈಗಾಗಲೇ ಶ್ರೀನಗರ ಸೇರಿದಂತೆ ಹಲವೆಡೆ ಕರ್ಫ್ಯೂ ಜಾರಿ ಮಾಡಿದ್ದಾರೆ. ಅನಂತ್ನಾಗ್, ಪುಲ್ವಾಮ, ಕುಲ್ಗಾಮ್, ಸೋಫಿಯನ್, ಬಾರಾಮುಲ್ಲಾ ಮತ್ತು ಪಟ್ಟನ್ ಪ್ರದೇಶಗಳಲ್ಲಿ ಈಗಾಗಲೇ ಕರ್ಫ್ಯೂ ಜಾರಿ ಮಾಡಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಬುರ್ಹಾನ್ ವಾನಿಯನ್ನು ಜುಲೈ8 ರಂದು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಬುರ್ಹಾನ್ ವಾನಿ ಹತ್ಯೆ ವಿರೋಧಿಸಿ ಕಾಶ್ಮೀರ ಪ್ರತ್ಯೇಕತಾವಾದಿಗಳು ಬಂದ್ ಗೆ ಕರೆ ನೀಡಿದ್ದರು. ಅದರ ಪರಿಣಾಮ ಕಾಶ್ಮೀರದಲ್ಲಿ ಹಿಂಸಾಚಾರ ಆರಂಭಗೊಂಡಿತ್ತು. ಪರಿಣಾಮ ಸಾಮಾನ್ಯ ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿತ್ತು.
ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳು ಹಾಗೂ ಅಲ್ಲಿನ ಸರ್ಕಾರ ಹರಸಾಹಸ ಪಟ್ಟಿತ್ತು. ಇದರಂತೆ ಕೊನೆಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಅಧಿಕಾರಿಗಳು ಸಫಲರಾಗಿದ್ದರು. ಪರಿಸ್ಥಿತಿ ತಿಳಿಗೊಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಹಲವೆಡೆ ಕರ್ಫ್ಯೂವನ್ನು ಹಿಂಪಡೆಯಲಾಗಿತ್ತು. ಆದರೆ, ಇಂದು ಶುಕ್ರವಾಗಿದ್ದು, ಪ್ರಾರ್ಥನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಸೂಕ್ಷ್ಮ ಪ್ರದೇಶ ಸೇರಿದಂತೆ ಹಲವೆಡೆ ಮತ್ತೆ ಕರ್ಫ್ಯೂವನ್ನು ಜಾರಿ ಮಾಡಲಾಗಿದೆ.