ನವದೆಹಲಿ: ಹುರಿಯತ್ ಕಾನ್ಫರೆನ್ಸ್ ನಾಯಕರನ್ನು ಸರ್ವಪಕ್ಷ ಮಾತುಕತೆಗೆ ಆಹ್ವಾನಿಸಬೇಕೆಂಬ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಸ್ವಾಗತಿಸಿದೆ.
ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ಬೆಂಬಲಿಸಿರುವ ಎನ್ ಸಿಪಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲೂ ಹುರಿಯತ್ ಕಾನ್ಫರೆನ್ಸ್ ಪ್ರಮುಖ ಸಾಧನವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಸಾಮಾನ್ಯವಾಗಿ ಪ್ರತ್ಯೇಕವಾದಿಗಳೊಂದಿಗೆ ಮಾತನಾಡಲು ನಾವು ಇಚ್ಛಿಸುವುದಿಲ್ಲ. ಆದರೆ ಈ ಬಾರಿ ಪ್ರತ್ಯೇಕತಾವಾದಿಗಳನ್ನು ಸಹಿಸಿಕೊಂಡು, ಮಾತುಕತೆ ನಡೆಸಿದರೆ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆಯಲಿದೆ ಎಂದು ಎನ್ ಸಿಪಿ ಹೇಳಿದೆ.
ಕಾಶ್ಮೀರದಲ್ಲಿ ಪ್ರತಿಭಟನಾ ನಿರತರ ಮೇಲೆ ಪಾವಾ ಶೆಲ್ ಗಳನ್ನು ಬಳಕೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆಯೂ ಮಾತನಾಡಿರುವ ಎನ್ ಸಿಪಿ ಮುಖಂಡ ಮಜೀದ್ ಮೆಮೊನ್, ಪೆಲೆಟ್ ಗನ್ ಗಳ ಬದಲು ಪಾವಾ ಶೆಲ್ ಗಳನ್ನು ಬಳಕೆ ಮಾಡಲು ನಿರ್ಧರಿಸಿರುವುದು, ಕಾಶ್ಮೀರದ ಜನತೆಯ ವಿಶ್ವಾಸ ಗೆಲ್ಲುವ ಮೊದಲ ಹಂತವಾಗಿದ್ದು, ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು ಎಂದು ಹೇಳಿದ್ದಾರೆ.