ನವದೆಹಲಿ: ಸೆಕ್ಸ್ ವಿವಾದದಲ್ಲಿ ಸಿಲುಕಿ ಹಾಕಿಕೊಂಡಿರುವ ಸಂದೀಪ್ ಕುಮಾರ್ ರನ್ನು ಮಹಾತ್ಮ ಗಾಂಧೀಜಿಗೆ ಹೋಲಿಕೆ ಮಾಡುವ ಮೂಲಕ ಆಮ್ ಆದ್ಮಿ ಪಕ್ಷದ ನಾಯಕ ಅಶುತೋಷ್ ಅವರು ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆಂದು ಬಿಜೆಪಿ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸತೀಶ್ ಉಪಾಧ್ಯಾಯ್ ಅವರು, ಒಬ್ಬ ಅತ್ಯಾಚಾರಿ ಆರೋಪಿಯನ್ನು ಮಹಾತ್ಮ ಗಾಂಧೀಜಿ, ಜಾರ್ಜ್ ಫರ್ನಾಂಡೀಸ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೋಲಿಕೆ ಮಾಡುವ ಮೂಲಕ ಅಶುತೋಷ್ ಅವರು ನಿಜಕ್ಕೂ ಜನರ ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿ ತಪ್ಪು ಮಾಡಿರುವುದು ಸಾಬೀತಾದ ಮೇಲೆ ಆ ವ್ಯಕ್ತಿಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಒಬ್ಬ ವ್ಯಕ್ತಿಯ ನಡತೆಯ ಬಗ್ಗೆ ನಿರ್ಣಯ ಕೈಕೊಳ್ಳುವುದಕ್ಕೆ ಅಶುತೋಷ್ ಯಾರು. ಪಡಿತರ ಚೀಟಿ ಪಡೆಯಲು ಇಚ್ಛಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯ ಪರವಾಗಿ ಬ್ಲಾಗ್ ಗಳಲ್ಲಿ ಬರೆದುಕೊಳ್ಳಲು ಅವರು ಯಾರು. ಅತ್ಯಾಚಾರ ಆರೋಪ ಹೊತ್ತಿರುವ ಆರೋಪಿಗೆ ಕ್ಲೀನ್ ಚಿಟ್ ನೀಡಲು ಹೇಗೆ ಸಾಧ್ಯ?
ಅಶುತೋಷ್ ಅವರು ಸಂದೀಪ್ ಪರವಾಗಿ ನಿಂತಿರುವುದು ಹಾಗೂ ಸಾಧನೆ, ತ್ಯಾಗ ಮಾಡಿದ ವ್ಯಕ್ತಿಗಳೊಂದಿಗೆ ಸಂದೀಪ್ ರನ್ನು ಹೋಲಿಕೆ ಮಾಡುವ ಮೂಲಕ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಅಶುತೋಷ್ ಈ ರೀತಿಯ ಹೇಳಿಕೆ ನೀಡುತ್ತಿದ್ದರೂ, ಆಪ್ ಮಾತ್ರ ತನಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. ಈ ರೀತಿಯಾಗಿ ಹೇಳಿಕೆ ನೀಡುತ್ತಿರುವ ಅಶುತೋಷ್ ವಿರುದ್ಧ ಆಪ್ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿದ್ದರೂ ಆಪ್ ಮೌನವಾಗಿರುವುದೇಕೆ? ಅಶುತೋಷ್ ಹೇಳಿಕೆ ವೈಯಕ್ತಿಕ ಹೇಳಿಕೆಯೆಂದು ಹೇಳುವ ಮೂಲಕ ಆಪ್ ನುಣುಚಿಕೊಳ್ಳಬಾರದು. ಅಶುತೋಷ್ ನಿಮ್ಮ ಪಕ್ಷದ ಪ್ರಮುಖ ಸದಸ್ಯರೇ ಆಗಿದ್ದಾರೆ. ಈಗಲು ಅವರು ನಿಮ್ಮ ಪಕ್ಷದಲ್ಲಿಯೇ ಇದ್ದಾರೆ. ಹೇಳಿಕೆಗೆ ಕ್ಷಮೆಯಾಚಿಸುವಂತೆ ಆಪ್ ಯಾವ ಕಾರಣಕ್ಕೆ ಕೇಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.