ಡೆಯೋರಿಯಾ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಖಾಟ್ ಪೆ ಚರ್ಚಾ ಕಾರ್ಯಕ್ರಮ ರೈತರ ನಡುವೆ ಕಿತ್ತಾಟದಲ್ಲಿ ಮುಕ್ತಾಯಗೊಂಡಿದೆ.
ಸಭೆ ಮುಗಿಸಿ ರಾಹುಲ್ ಗಾಂಧಿ ಹೊರಡುತ್ತಿದ್ದಂತೆ ಮಂಚಗಳಿಗಾಗಿ ಅಲ್ಲಿನ ರೈತರು ಕಿತ್ತಾಟ ಶುರು ಹಚ್ಚಿಕೊಂಡರು. ಮಂಚಗಳಿಗಾಗಿ ತಮ್ಮಲ್ಲೆ ಬಡಿದಾಡಿಕೊಂಡು ಕೆಲವು ಮಂದಿ ಮಂಚದ ಸಮೇತ ತೆರಳಿದರು.
ಡೇವರಿಯಾದ ರುದ್ರಪುರ್ ಕಾಲೇಜು ಮೈದಾನದಲ್ಲಿ 'ಕಿಸಾನ್ ಯಾತ್ರೆ'ಗೆ ರಾಹುಲ್ ಗಾಂಧಿ ಚಾಲನೆ ನೀಡಿದರು. ಸುಮಾರು 2,500 ಸಾವಿರ ಕಿ.ಮೀ. ಈ 'ಕಿಸಾನ್ ಯಾತ್ರೆ' ನಡೆಯಲಿದ್ದು, ದೆಹಲಿಯಲ್ಲಿ ಮುಕ್ತಾಯವಾಗಲಿದೆ. ಕಿಸಾನ್ ಯಾತ್ರೆ' ಉದ್ಘಾಟಿಸಿದ ನಂತರ ರಾಹುಲ್ ರೈತರ ಜೊತೆ 45 ನಿಮಿಷ ಸಮಾಲೋಚನೆ ನಡೆಸಿದರು. ಈ ವೇಳೆ ಕಾಲೇಜು ಮೈದಾನದಲ್ಲಿ ಹಾಕಿರುವ 1 ಸಾವಿರ ಮಂಚಗಳ ಮಧ್ಯೆ ರಾಹುಲ್ ಕುಳಿತು ರೈತರ ಜೊತೆ ಮುಕ್ತ ಚರ್ಚಿಸಿದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಶುರು ಮಾಡಿದೆ. 27 ವರ್ಷದಿಂದ ಯುಪಿಯಲ್ಲಿ ಅಧಿಕಾರದಿಂದ ವಂಚಿತವಾಗಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ರಾಹುಲ್ ಗಾಂಧಿ 'ಕಿಸಾನ್ ಯಾತ್ರೆ' ಹಮ್ಮಿಕೊಂಡಿದ್ದಾರೆ.