ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಲ್ಲುತೂರಾಟದಲ್ಲಿ ತೊಡಗಿದ್ದ ಪ್ರತಿಭಟನಾಕಾರರ ನಿಯಂತ್ರಿಸಲು ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿದ್ದ ಯುವಕರನ್ನು ನಿಯಂತ್ರಿಸಲು ಸೈನಿಕರು ಪೆಲ್ಲೆಟ್ ಗನ್ ಬಳಕೆ ಮಾಡಿದ್ದಾರೆ. ಈ ವೇಳೆ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದು, ಮೃತನನ್ನು 23 ವರ್ಷದ ಯಾವರ್ ಭಟ್ ಎಂದು ಗುರುತಿಸಲಾಗಿದೆ. ಅನಂತ್ ನಾಗ್ ಜಿಲ್ಲೆಯ ಬೊಟೆಂಗೂ ಪ್ರದೇಶದಲ್ಲಿ ಸೈನಿಕರತ್ತ ಕಲ್ಲು ತೂರುತ್ತಿದ್ದ ಸಂದರ್ಭದಲ್ಲಿ ಪೆಲ್ಲೆಟ್ ಗನ್ ಗುಂಡೇಟಿನಿಂದಾಗಿ ಯಾವರ್ ಭಟ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇಂತಹುದೇ ಶೋಪಿಯಾನ್ ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಉದ್ರಿಕ್ತರನ್ನು ನಿಯಂತ್ರಿಸಲು ಅಶ್ರುವಾಯು ಪ್ರಯೋಗಿಸಿದಾಗ 25 ವರ್ಷದ ಸಾಯರ್ ಅಹ್ಮದ್ ಶೇಖ್ ಎಂಬಾತ ಮೃತಪಟ್ಟಿದ್ದಾನೆ. ಅಶ್ರುವಾಯು ಹೊಗೆಯಿಂದಾಗಿ ಅಸ್ವಸ್ಥನಾಗಿದ್ದ ಶೇಖ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ, ಅಷ್ಟು ಹೊತ್ತಿಗಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಬದಗಾಮ್ ನಲ್ಲಿ ಮತ್ತೆ ಆರಂಭವಾದ ಪ್ರತಿಭಟನೆ
ಇನ್ನು ನಿಷೇಧಾಜ್ಞೆ ತೆರವಿನ ಬಳಿಕ ತಾತ್ಕಾಲಿಕವಾಗಿ ಶಾಂತವಾಗಿದ್ದ ಕಾಶ್ಮೀರದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಮತ್ತೆ ಗಲಭೆ ಉಲ್ಬಣವಾಗಿದೆ. ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸರ್ಕಾರಿ ಸವಲತ್ತುಗಳನ್ನು ಹಿಂಪಡೆಯುವ ಕುರಿತು ಕೇಂದ್ರ ಸರ್ಕಾರ ಈ ಹಿಂದೆ ಚಿಂತನೆ ನಡೆಸಿತ್ತು. ಆದರೆ ಜಮ್ಮು ಕಾಶ್ಮೀರ ಸರ್ಕಾರದೊಂದಿಗಿನ ಭೇಟಿ ಬಳಿಕ ಕೇಂದ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಇದರ ಬೆನ್ನಲ್ಲೇ ಬದಗಾಮ್ ನಲ್ಲಿ ಗಲಭೆ ಆರಂಭವಾಗಿದೆ. ಬದಗಾಮ್ ಜಿಲ್ಲೆಯಲ್ಲಿ ಆರಂಭವಾದ ಪ್ರತಿಭಟನೆ ಅನಂತ್ ನಾಗ್ ಹಾಗೂ ಶೋಪಿಯಾನ್ ಜಿಲ್ಲೆಗಳಿಗೂ ವ್ಯಾಪಿಸಿದೆ. ಕಳೆದ ಜುಲೈ 8ರಂದು ಸೈನಿಕರ ಗುಂಡಿಗೆ ಉಗ್ರ ಬುರ್ಹಾನ್ ವಾನಿ ಹತ್ಯೆಯಾದ ಬಳಿಕ ಆರಂಭವಾದ ಗಲಭೆಯಲ್ಲಿ ಈ ವರೆಗೂ 78 ಮಂದಿ ಸಾವನ್ನಪ್ಪಿದ್ದರು. ಇದೀಗ ಇಂದು ಮತ್ತೆ ಇಬ್ಬರು ಗಲಭೆ ಕೋರರು ಸಾವನ್ನಪ್ಪಿದ್ದಾರೆ.
ಈ ಹಿಂದೆಯಷ್ಟೇ ಕೇಂದ್ರ ಸರ್ಕಾರ ಪೆಲ್ಲೆಟ್ ಗನ್ ಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಪರ್ಯಾಯ ವ್ಯವಸ್ಥೆಯಾಗುವುದರೊಳಗೆ ಮತ್ತೆ ಪೆಲ್ಲೆಟ್ ಗನ್ ಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.