ದೇಶ

ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲುವವರೆಗೂ ಬಲೂಚಿಸ್ತಾನಕ್ಕೆ ಬೆಂಬಲ: ಭಾರತ

Lingaraj Badiger
ನವದೆಹಲಿ: ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಲೂಚಿಸ್ತಾನ ವಿಚಾರವನ್ನು ಪ್ರಸ್ತಾಪಿಸಿದ್ದ ಭಾರತ, ಇದೀಗ ಎಲ್ಲಿಯವರೆಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆಯೋ ಅಲ್ಲಿಯವರೆಗೂ ಬಲೂಚಿಸ್ತಾನ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಗುರುವಾರ ಹೇಳಿದೆ.
ದಬ್ಬಾಳಿಕೆ, ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲುವವರೆಗೂ ಭಾರತ ಬಲೂಚಿಸ್ತಾನ ವಿಷಯವನ್ನು ಪ್ರಸ್ತಾಪಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ನಿನ್ನೆಯಷ್ಟೇ ವಿಶ್ವಸಂಸ್ಥೆಯಲ್ಲಿ ಬಲೂಚಿಸ್ತಾನ ವಿಷಯ ಪ್ರಸ್ತಾಪಿಸಿದ್ದ ಭಾರತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಅಧಿವೇಶನವೊಂದರಲ್ಲಿ ಮಾತನಾಡಿದ ಜಿನೀವಾ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಮತ್ತು ಶಾಶ್ವತ ಪ್ರತಿನಿಧಿ ಅಜಿತ್ ಕುಮಾರ್ ಅವರು, ಬಲೂಚಿಸ್ತಾನದಲ್ಲಿ ವ್ಯಾಪಕವಾಗಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮ ಕಾಶ್ಮೀರದಲ್ಲಿ ಇಂದಿಗೂ ಹಿಂಸಾಚಾರ ಮುಂದುವರೆದಿದೆ ಎಂದು ಹೇಳಿದ್ದರು.
SCROLL FOR NEXT