ನವದೆಹಲಿ: ಸಮಾಜವಾದಿ ಪಕ್ಷದಲ್ಲಿ ಕಳೆದೊಂದು ತಿಂಗಳಿನಿಂದ ಮನೆ ಮಾಡಿರುವ ರಾಜಕೀಯ ಬಿಕ್ಕಟ್ಟು ತಾರಕ್ಕೇರಿದ್ದು, ಬಿಕ್ಕಟ್ಟು ಶಮನಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ಸಂಸದೀಯ ಸಭೆ ಕರೆದಿದ್ದಾರೆ.
ಪಕ್ಷದಲ್ಲಿನ ಬಿಕ್ಕಟ್ಟು ಸಂಬಂಧ ತಮ್ಮ ಬೆಂಬಲದ ಇಬ್ಬರು ಸಚಿವರನ್ನು ಸಿಎಂ ಅಖಿಲೇಶ್ ಯಾದವ್ ಸಂಪುಟದಿಂದ ಕೈಬಿಟ್ಟ ಬೆನ್ನಲ್ಲೇ ದೆಹಲಿಗೆ ದೌಡಾಯಿಸಿದ್ದ ಶಿವಪಾಲ್ ಯಾದವ್ ಅವರು ತಮ್ಮ ಸಹೋದರ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ತಮಗೆ ಅಖಿಲೇಶ್ ಯಾದವ್ ಸಂಪುಟದಲ್ಲಿ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಇಂದು ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ಪಕ್ಷದ ಸಂಸದೀಯ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಶಮನಗೊಳಿಸಲು ಮುಲಾಯಂ ಪ್ರಯತ್ನಿಸಲಿದ್ದಾರೆ.
ಇನ್ನು ಕೆಲವೇ ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ಪಕ್ಷದಲ್ಲಿನ ಬಿಕ್ಕಟ್ಟು ಆಡಳಿತಾರೂಢ ಎಸ್ ಪಿಗೆ ಮುಳುವಾಗುವ ಸಾಧ್ಯತೆಗಳಿರುವುದರಿಂದ ಮುಲಾಯಂ ಶತಾಯಗತಾಯ ಬಿಕ್ಕಟ್ಟ ಶಮನಕ್ಕೆ ಮುಂದಾಗಲಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.