ದೇಶ

ತಮಿಳುನಾಡು ಬಂದ್: ಸ್ಟಾಲಿನ್, ವೈಕೋ ಸೇರಿ ಹಲವರು ಪೊಲೀಸ್ ವಶಕ್ಕೆ

Sumana Upadhyaya
ಚೆನ್ನೈ; ಕಾವೇರಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ತಮಿಳು ನಾಡಿನಲ್ಲಿ ನಡೆಯುತ್ತಿರುವ ಬಂದ್ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಎಂಡಿಎಂಕೆ ಮುಖ್ಯಸ್ಥ ವೈಕೋ, ಡಿಎಂಕೆ ನಾಯಕ ಸ್ಟಾಲಿನ್, ಕನಿಮೋಜ್ಹಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಮತ್ತು ಅವರ ಬೆಂಬಲಿಗರು ಎಗ್ಮೋರ್ ರೈಲು ನಿಲ್ದಾಣದಲ್ಲಿ ರ್ಯಾಲಿ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.
ಚೆನ್ನೈಯಲ್ಲಿ ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿದ್ದು, ಕೆಲವು ರಸ್ತೆಗಳಲ್ಲಿ ಟೀ ಅಂಗಡಿಗಳು ಬಿಟ್ಟರೆ ಹೆಚ್ಚಿನ ಅಂಗಡಿ-ಮುಂಗಟ್ಟುಗಳು ಮುಚ್ಚಿವೆ. ಸರ್ಕಾರಿ ಬಸ್ಸುಗಳಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಬಹಳ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಿದ್ದಾರೆ. ಪೆಟ್ರೋಲ್ ಬಂಕುಗಳು ಬಹಳ ವಿರಳ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ವಿಸಿಕೆಯ ತೋಲ್ ತಿರುಮವಲವನ್ ಅವರನ್ನು ಕೂಡ ಪೊಲೀಸರು ಸೆರೆಯಾಗಿಸಿದ್ದಾರೆ. ಪುದುಚೆರಿಯಲ್ಲಿ ಕೂಡ ಸಂಪೂರ್ಣ ಬಂದ್ ಇದ್ದು, ತಮಿಳು ನಾಡಿನ ಸರ್ಕಾರಿ ಬಸ್ಸುಗಳು ಮಾತ್ರ ಪೊಲೀಸರ ಭದ್ರತೆಯೊಂದಿಗೆ ಓಡಾಡುತ್ತಿವೆ.
ತಿರುಚಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಂಡಿಎಂಕೆ ಮುಖ್ಯಸ್ಥ ವೈಕೋ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. 
ನಾಗಪಟ್ಟಿಣಂನಲ್ಲಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ಇಳಿಯದೆ ಬಂದ್ ಗೆ ಬೆಂಬಲ ನೀಡುತ್ತಿದ್ದಾರೆ. ಯಾತ್ರಿಕರು ಮತ್ತು ಪ್ರವಾಸಿಗರಿಗೆ ಇಂದಿನ ಬಂದ್ ನಿಂದಾಗಿ ತೊಂದರೆಯಾಗುತ್ತಿದೆ. ತಿರುಚಿಯಲ್ಲಿ ಬಸ್ಸುಗಳು ಓಡಾಡುತ್ತಿವೆ. ಇದುವರೆಗೆ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. 
ಕರ್ನಾಟಕದಲ್ಲಿ ತಮಿಳರನ್ನು ಗುರಿಯಾಗಿಸಿಕೊಂಡು ಹಿಂಸೆ ನಡೆಸಿರುವುದನ್ನು ಖಂಡಿಸಿ ಮತ್ತು ತಮಿಳು ನಾಡಿಗೆ ಕಾವೇರಿ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ  ರೈತರು, ವ್ಯಾಪಾರ ಮತ್ತು ಸಾಗಾಟ ಒಕ್ಕೂಟಗಳು ತಮಿಳು ನಾಡಿನಲ್ಲಿ ಇಂದು ಕರೆ ನೀಡಿರುವ ಬಂದ್ ಗೆ ಆಡಳಿತಾರೂಢ ಎಡಿಎಂಕೆಯ ಮೈತ್ರಿಕೂಟಗಳು, ವಿವಿಧ ವ್ಯಾಪಾರಿ ಸಂಘಟನೆಗಳು, ವಿರೋಧ ಪಕ್ಷಗಳು ಬಂದ್ ಗೆ ಬೆಂಬಲ ನೀಡುತ್ತಿವೆ.
SCROLL FOR NEXT