ನವದೆಹಲಿ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಈ ಹಿಂದೆ ನಿಗದಿಯಾಗಿದ್ದ ರಷ್ಯಾ- ಅಮೆರಿಕ ಪ್ರವಾಸವನ್ನು ಮುಂದೂಡಿದ್ದು ಗೃಹ ಇಲಾಖೆ, ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಲಿದ್ದಾರೆ.
ಸೆ.18 ರ ಬೆಳಿಗ್ಗೆ 5:30 ರ ವೇಳೆಗೆ ಕಣಿವೆ ರಾಜ್ಯದ ಬಾರಾಮುಲ್ಲಾದಲ್ಲಿರುವ ಉರಿ ಸೆಕ್ಟರ್ ಪ್ರದೇಶದಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಸೆ. 18 ರಿಂದ ನಿಗದಿಯಾಗಿದ್ದ ರಷ್ಯಾ- ಅಮೆರಿಕ ಪ್ರವಾಸವನ್ನು ಮುಂದೂಡಿದ್ದಾರೆ.
ರಷ್ಯಾ- ಅಮೆರಿಕ ಪ್ರವಾಸದ ವೇಳೆ ರಾಜನಾಥ್ ಸಿಂಗ್ ಉಭಯ ರಾಷ್ಟ್ರಗಳ ಗೃಹ ಸಚಿವರೊಂದಿಗೆ ಪಾಕಿಸ್ತಾನ ಭಾರತದ ಗಡಿ ಪ್ರದೇಶದಲ್ಲಿ ನಡೆಸುತ್ತಿರುವ ಭಯೋತ್ಪಾದನೆಯ ವಿಷಯವನ್ನು ಪ್ರಮುಖವಾಗಿ ಚರ್ಚಿಸಲಿದ್ದರು. ಆದರೆ ರಾಜನಾಥ್ ಸಿಂಗ್ ರಷ್ಯಾಗೆ ತೆರಳಬೇಕಿದ್ದ ದಿನದಂದೇ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು 7 ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಗೃಹ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹ ಭಾಗಿಯಾಗುವ ಸಾಧ್ಯತೆ ಇದೆ.