ಲಖನೌ: ಕಾಮುಕರ ಅಟ್ಟಹಾಸಕ್ಕೆ ಉತ್ತರ ಪ್ರದೇಶ ಮತ್ತೆ ತತ್ತರಿಸಿದ್ದು, ಸಾಮೂಹಿಕವಾಗಿ ಅತ್ಯಾಚಾರ ಗೈದು ಚಲಿಸುತ್ತಿದ್ದ ರೈಲಿನಿಂದಲೇ ಮಹಿಳೆಯನ್ನು ಎಸೆದಿರುವ ಘಟನೆ ಮಾವ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಜೌನ್ ಪುರದ ಶಾಹ್ ಗಂಜ್ ಪ್ರದೇಶದಲ್ಲಿರುವ ಸಂಬಂಧಿಗಳನ್ನು ಕಾಣಲು ತಮ್ಸಾ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆ ಮೇಲೆ ಕಾಮುಕರ ಗುಂಪೊಂದು ರೈಲಲ್ಲೇ ಸಾಮೂಹಿಕವಾಗಿ ಅತ್ಯಾಚಾರ ಗೈದಿದ್ದು, ಬಳಿಕ ಚಲಿಸುತ್ತಿದ್ದ ರೈಲಿನಿಂದ ಆಕೆಯನ್ನು ಎಸೆದಿದ್ದಾರೆ. ರೈಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯ ಗ್ರಾಮಸ್ಥರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಮಾವ್ ಜಿಲ್ಲೆಯ ಕಾಜಾ ಕುರ್ದ್ ಗ್ರಾಮದ ಬಳಿಯ ರೈಲ್ವೇ ಹಳಿಯ ಬಳಿ ಗ್ರಾಮಸ್ಥರು ನಡೆದು ಹೋಗುತ್ತಿದ್ದಾಗ ಮಹಿಳೆಯ ಆಕ್ರಂದನ ಕೇಳಿದ್ದು, ಇದನ್ನು ಹಿಂಬಾಲಿಸಿದಾಗ ಹಳಿಯ ಪಕ್ಕದಲ್ಲಿ ನಗ್ನವಾಗಿ ಬಿದ್ದಿದ್ದ ಮಹಿಳೆ ಕೂಗುತ್ತಿದ್ದ ದೃಶ್ಯ ಕಂಡುಬಂದಿದೆ. ಮಹಿಳೆಯ ಪಾದ ತುಂಡಾಗಿ, ಮಹಿಳೆ ನೆರವಿಗಾಗಿ ಕೂಗುತ್ತಿದ್ದಳು. ಈ ವೇಳೆ ನಾವೇ ಆಕೆಗೆ ಬಟ್ಟೆ ನೀಡಿ ಬಳಿಕ ಆಸ್ಪತ್ರೆಗೆ ದಾಖಲು ಮಾಡಿದೆವು ಎಂದು ಗ್ರಾಮಸ್ಥರು ಹೇಳಿದ್ದಾರೆ. ಸಂತ್ರಸ್ಥ ಮಹಿಳೆ ಹೇಳಿರುವಂತೆ ಜೌನ್ ಪುರದ ಶಾಹ್ ಗಂಜ್ ಪ್ರದೇಶದಲ್ಲಿರುವ ಸಂಬಂಧಿಗಳನ್ನು ಕಾಣಲು ತಮ್ಸಾ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಕೆಲ ದುಷ್ಕರ್ಮಿಗಳು ತನ್ನ ಮೇಲೆ ಅತ್ಯಾಚಾರ ಮಾಡಿ ರೈಲಿನಿಂದ ಕೆಳಗೆ ಎಸೆದರು ಎಂದು ಹೇಳಿದ್ದಾಳೆ.
ಪ್ರಸ್ತುತ ಮಾವ್ ಜಿಲ್ಲೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿ ಇನ್ನೂ ಲಭ್ಯವಾಗಿಲ್ಲವಾದರೂ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.