ದೇಶ

ಟೆಕ್ಕಿ ಸ್ವಾತಿ ಕೊಲೆ ಪ್ರಕರಣ: ರಾಮ್ ಕುಮಾರ್ ಸಾವು ಆತ್ಮಹತ್ಯೆಯಲ್ಲ ಕೊಲೆ- ಪರ ವಕೀಲ

Manjula VN

ಚೆನ್ನೈ: ಸಾಕಷ್ಟು ಸಂಚಲನ ಮೂಡಿಸಿದ್ದ ಇನ್ಫೋಸಿಸ್ ಸಂಸ್ಥೆಯ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿದ್ದ ಆರೋಪಿ ರಾಮ್ ಕುಮಾರ್ ಸಾವು ಆತ್ಮಹತ್ಯೆಯಲ್ಲ ಅದೊಂದು ವ್ಯವಸ್ಥಿತ ಕೊಲೆ ಎಂದು ರಾಮ್ ಕುಮಾರ್ ಪರ ವಕೀಲ ಆರೋಪಿಸಿದ್ದಾರೆ.

ಸ್ವಾತಿ ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿ ಆರೋಪಿ ರಾಮ್ ಕುಮಾರ್ ನನ್ನು  ಚೆನ್ನೈ ಹೊರವಲಯದಲ್ಲಿರುವ ಪುಳಲ್ ಜೈಲಿನಲ್ಲಿರಿಸಲಾಗಿತ್ತು. ಆದರೆ, ಅದಾವ ಕಾರಣಕ್ಕೋ ಏನೋ ನಿನ್ನೆ ಇದ್ದಕ್ಕಿದ್ದಂತೆ ಜೈಲಿನಲ್ಲಿ ಆತ್ಮಹತ್ಯೆ ಶರಣಾಗಿದ್ದ. ಜೈಲಲ್ಲಿದ್ದ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿದ ರಾಮ್ ಕುಮಾರ್ ಬಳಿಕ ಅದನ್ನು ತನ್ನ ಕುತ್ತಿಗೆಗೆ ಬಲವಾಗಿ ಸುತ್ತಿಕೊಂಡಿದ್ದಾನೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಜೈಲಾಧಿಕಾರಿಗಳು ಕೂಡಲೇ ರಾಮ್ ಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ರಾಮ್ ಕುಮಾರ್ ಆತ್ಮಹತ್ಯೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಆತನ ಪರ ವಕೀಲರು ಅಧಿಕಾರಿಗಳ ವಿರುದ್ಧವೇ ಆರೋಪ ವ್ಯಕ್ತಪಡಿಸಿದ್ದಾರೆ.

ನಿನ್ನೆಯಷ್ಟೇ ರಾಮ್ ಕುಮಾರ್ ಜೊತೆಗೆ ನಾನು ಮಾತುನಾಡಿದ್ದೆ. ಜಾಮೀನು ಸಿಗುವ ಹಾಗೂ ಜೈಲಿನಿಂದ ಬಿಡುಗಡೆಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯಾವುದೇ ಕಾರಣವಿರಲಿಲ್ಲ. ರಾಮ್ ಕುಮಾರ್ ಸಾವು ಆತ್ಮಹತ್ಯೆಯಲ್ಲ ಇದೊಂದು ವ್ಯವಸ್ಥಿತ ಕೊಲೆ ಎಂಬುದು ಇದರಿಂದ ಸಾಬೀಗುತ್ತದೆ ಎಂದು ಪರ ವಕೀಲ ರಾಮರಾಜ್ ಅವರು ಹೇಳಿದ್ದಾರೆ.

ಶನಿವಾರಷ್ಟೇ ಬೆಳಿಗ್ಗೆ 11.30 ರ ಸುಮಾರಿಗೆ ರಾಮ್ ಕುಮಾರ್ ನನ್ನು ಭೇಟಿ ಮಾಡಿ 12.30ರ ವರೆಗೂ ಮಾತನಾಡಿದ್ದೆ. ಆತನ ನ್ಯಾಯಾಂಗ ಬಂಧನ ಮುಕ್ತಾಯಗೊಳ್ಳುತ್ತಿದ್ದು, ಇಂದು ಆತನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ರಾಮ್ ಕುಮಾರ್ ಸಂಬಂಧಿ ಸೆಲ್ವಕುಮಾರ್ ಅವರು ಮಾತನಾಡಿ, ಸೋಮವಾರ ರಾಮ್ ಕುಮಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂಬ ವಿಚಾರ ತಿಳಿದಿತ್ತು. ಹೀಗಾಗಿ ಆತನನ್ನು ನೋಡಲು ನಾವು ಚೆನ್ನೈಗೆ ಬಂದಿದ್ದೆವು. ಇದರ ಮಧ್ಯೆಯೇ ಚೆನ್ನೈ ಪೊಲೀಸರಿಂದ ನಮಗೆ ಕರೆಯೊಂದು ಬಂದಿತ್ತು. ರಾಮ್ ಕುಮಾರ್ ಪರಿಸ್ಥಿತಿ ಹದಗೆಟ್ಟಿದ್ದು, ಕೂಡಲೇ ಸರ್ಕಾರಿ ರೊಯಪೇಟಾ ಆಸ್ಪತ್ರೆಗೆ ಬರುವಂತೆ ತಿಳಿಸಿದರು. ಆಸ್ಪತ್ರೆ ಬಳಿ ಬಂದಾಗ ರಾಮ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿದರು ಎಂದು ಹೇಳಿದ್ದಾರೆ.

ರಾಮ್ ಕುಮಾರ್ ತಂದೆ ಪರಮಶಿವಂ ಮಾತನಾಡಿ, ನನ್ನ ಮಗನನ್ನು ಪೊಲೀಸರೇ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ರಾಮ್ ಕುಮಾರ್ ಸಾಯುವುದಕ್ಕೂ ಮುನ್ನ ಆತನ ಎಡಭಾಗದ ಕೆನ್ನೆ, ಎದೆ ಎಲೆಕ್ಟ್ರಿಕ್ ಶಾಕ್ ತಗುಲಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

SCROLL FOR NEXT