ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ 71ನೇ ಅಧಿವೇಶನದಲ್ಲಿ ಮಾತನಾಡುತ್ತಿರುವ ಪಾಕಿಸ್ತಾನ ಪ್ರಧಾನ ಮಂತ್ರಿ ಮೊಹಮ್ಮದ್ ನವಾಜ್ ಷರೀಫ್
ನವದೆಹಲಿ: ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸಿರುವ ಬಿಜೆಪಿ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಹಿಜ್ ಬುಲ್ ಮುಜಾಹಿದ್ದೀನ್ ಗುಂಪಿನ ಸುಪ್ರೀಂ ಕಮಾಂಡರ್ ತರಹ ಮಾತನಾಡುತ್ತಾರೆ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮುಕ್ತವಾಗಿ ಭಯೋತ್ಪಾದಕರ ಪರ ಪ್ರಚಾರ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಬಲೂಚಿಸ್ತಾನ, ಸಿಂಧ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ದೌರ್ಜನ್ಯ ನಡೆಸುತ್ತಿದೆ ಎಂದು ಆರ್ ಎಸ್ಎಸ್ ಕೂಡ ವಾಗ್ದಾಳಿ ನಡೆಸಿದ್ದು, ಕಾಶ್ಮೀರದಲ್ಲಿ ಅದರ ದುಸ್ಸಾಹಸದಿಂದಾಗಿ ಕಾಶ್ಮೀರದ ಜನರು ಸ್ವತಃ ಅವರನ್ನೇ ಕೊಲ್ಲುವ ಪರಿಸ್ಥಿತಿ ಬಂದಿದೆ. ಇಂದು ಅಟ್ಟಹಾಸದಿಂದ ಮೆರೆಯುತ್ತಿರುವ ಪಾಕ್ ಪಾಕ್ ಗೆ ನಾಳೆ ಮುಳುವಾಗಲಿದೆ ಎಂದು ಹೇಳಿದೆ.
'' ನವಾಜ್ ಷರೀಫ್ ನಿನ್ನೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ರೀತಿ ಅತ್ಯಂತ ಕರುಣಾಜನಕವಾಗಿತ್ತು. ಅವರು ಪಾಕಿಸ್ತಾನದ ಸುಪ್ರೀಂ ಕಮಾಂಡರ್ ನಂತೆ ಮಾತನಾಡಲಿಲ್ಲ, ಬದಲಿಗೆ ಹಿಜ್ ಬುಲ್ ಮುಜಾಹಿದ್ದೀನ್ ಗುಂಪಿನ ಸುಪ್ರೀಂ ಕಮಾಂಡರ್ ರೀತಿಯಲ್ಲಿ ಮಾತನಾಡಿದ್ದಾರೆ. ಇದರಲ್ಲೇ ಹೆಚ್ಚಿನ ವಿವರಣೆ ಬೇಕಿಲ್ಲ ಎಂದು ಗೊತ್ತಾಗುತ್ತದೆ. ಪಾಕಿಸ್ತಾನವನ್ನು ನಿಸ್ಸಂಶಯವಾಗಿ ಭಯೋತ್ಪಾದಕ ದೇಶ ಎಂದು ಘೋಷಣೆ ಮಾಡಬಹುದು'' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ಕಾಂಗ್ರೆಸ್ ಆಪಾದನೆ: ಇನ್ನೊಂದೆಡೆ ನವಾಜ್ ಷರೀಫ್ ವಿರುದ್ಧ ಕಾಂಗ್ರೆಸ್ ಕೂಡ ದೂರಿದೆ. ವಿಶ್ವಸಂಸ್ಥೆಯಲ್ಲಿ ನವಾಜ್ ಷರೀಫ್ ರು ಕಾಶ್ಮೀರದ ಪರವಾಗಿ ಮಾತನಾಡಿದ ರೀತಿ ಅತ್ಯಂತ ನಾಟಕೀಯವಾಗಿತ್ತು ಮತ್ತು ಭಯೋತ್ಪಾದಕ ಬುರ್ಹಾನ್ ವಾನಿಯನ್ನು ವೈಭವೀಕರಿಸಿ ಮಾತನಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ವಿಶ್ವಸಂಸ್ಥೆಯನ್ನುದ್ದೇಶಿಸಿ ಮಾತನಾಡುವಾಗ ಅತ್ಯಂತ ಕಟುವಾದ ಮತ್ತು ತೀಕ್ಷ್ಣ ತಿರುಗೇಟು ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ಗಟ್ಟಿಯಾದ ವಾಸ್ತವತೆಯನ್ನು ಮುಂದಿಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜಕೀಯ ಪಕ್ಷಗಳ ಸಲಹೆ ಪಡೆದುಕೊಂಡು ವಾಸ್ತವ ಮತ್ತು ಸ್ಪಷ್ಟ ಹೆಜ್ಜೆಗಳನ್ನು ಪಾಕಿಸ್ತಾನದ ಕ್ರಮಕ್ಕೆ ಪ್ರತ್ಕ್ರಮವಾಗಿ ನೀಡಬೇಕು ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನ ವೈಭವೀಕರಿಸುವ ಮೂಲಕ ನವಾಜ್ ಷರೀಫ್ ಅವರ ಮತ್ತು ಅವರ ದೇಶದ ಬೆಂಬಲ, ಕರುಣೆ ಎಲ್ಲಿಗೆ ಇದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.