ನವದೆಹಲಿ: 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ನಟ ಸಂಜಯ್ ದತ್ ಗೆ ಎಕೆ-56 ರೈಫಲ್ ಒದಗಿಸಿದ ಆರೋಪಿ ಹನೀಫ್ ಕಡಾವಾಲಾ ಹತ್ಯೆ ಸಂಬಂಧ ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು, ದರೋಡೆಕೋರ ಛೋಟಾ ರಾಜನ್ ಮತ್ತು ಆತನ ಸಹಚರರ ವಿರುದ್ಧ ಕೇಸು ದಾಖಲಿಸಿದೆ.
''ಕಡಾವಾಲಾ ಹತ್ಯೆ ಪ್ರಕರಣ ಕೇಸಿನ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ ಎಂದು ಸಂಸ್ಥೆಯ ವಕ್ತಾರ ಆರ್.ಕೆ.ಗೌರ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಲ್ಲಿಂದ ಸಿಬಿಐ ತನಿಖೆ ಕೈಗೆತ್ತಿಕೊಳ್ಳಲಿದೆ.
ಕಡಾವಾಲಾ ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಛೋಟಾ ರಾಜನ್, ಆತನ ಸಹಚರ ಗುರು ಸತಮ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲಿಸಲಾಗಿತ್ತು.
1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳನ್ನು ಕಡಾವಾಲಾ ಟೈಗರ್ ಮೆನನ್ ಸೂಚನೆ ಮೇರೆಗೆ ಮುಂಬೈಗೆ ಸಾಗಿಸಿದ್ದ ಎನ್ನಲಾಗುತ್ತಿದೆ.