ದೇಶ

ಪ್ರಧಾನಿ ಮೋದಿ ಭಾಷಣವನ್ನು ಹಗೆತನದ ಭಾಷಣ ಎಂದ ಪಾಕಿಸ್ತಾನ!

Srinivas Rao BV

ಇಸ್ಲಾಮಾಬಾದ್: ಕೇರಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಗುಡುಗಿದ್ದು, ಪಾಕಿಸ್ತಾನದ ಮಾಧ್ಯಮಗಳಲ್ಲಿ ತಲ್ಲಣ ಮೂಡಿಸಿದೆ. ಪಾಕ್ ಮಾಧ್ಯಮಗಳು ಮೋದಿ ಅವರ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿವೆ. ಅಲ್ಲದೇ ಇತ್ತ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪಾಕಿಸ್ತಾನ ಮಾಧ್ಯಮಗಳು ಮೋದಿ ಭಾಷಣದ ವಿಶ್ಲೇಷಣೆಗೆ ಮುಂದಾಗಿದ್ದವು ಎನ್ನುವುದು ಗಮನಾರ್ಹ ಅಂಶ.

ಪ್ರಧಾನಿ ಭಾಷಣದಲ್ಲಿ ಪಾಕಿಸ್ತಾನವನ್ನು ವಿಶ್ವಸಮುದಾಯದೆದುರು ಒಂಟಿಯಾಗಿ ನಿಲ್ಲಿಸುತ್ತೇವೆ ಎಂಬ ಅಂಶವನ್ನೇ ಪ್ರಧಾನವಾಗಿ ಪರಿಗಣಿಸಿರುವ ಪಾಕಿಸ್ತಾನಿ ಮಾಧ್ಯಮಗಳು ಮೋದಿ ಅವರದ್ದು ವಿಷಪೂರಿತ, ಹಗೆತನದ ಭಾಷಣ ಎಂದು ಹೇಳಿವೆ. ಪಾಕ್ ನ ಆಂಗ್ಲ ಮಾಧ್ಯಮ ದಿ ನ್ಯೂಸ್, ಪಾಕಿಸ್ತಾನವನ್ನು ಏಕಾಂಗಿಯಾಗಿಯಾಗಿ ನಿಲ್ಲಿಸುವ ಬೆದರಿಕೆ ಹಾಕಿದ ಮೋದಿ ಎಂದು ಶೀರ್ಷಿಕೆಯಡಿ ಮುಖಪುಟದಲ್ಲಿ ವರದಿ ಮಾಡಿದೆ. ದಿ ಎಕ್ಸ್ ಪ್ರೆಸ್ ಟ್ರಿಬ್ಯುನ್ ಸಹ ಇದೆ ಮಾದರಿಯ ಮುಖಪುಟ ವರದಿ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಬೆದರಿಕೆ ಹಾಕಿದ್ದಾರೆ ಎಂದು ವರದಿ ಮಾಡಿದೆ. 
ಪ್ರಧಾನಿ ಮೋದಿ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿರುವ ಜಿಯೋ ಟಿವಿ ಸಹ ಮೋದಿ ವಿರುದ್ಧ ಕಿಡಿ ಕಾರಿದ್ದು, ಪಾಕಿಸ್ತಾನವನ್ನು ಬೆದರಿಸಿದ ಭಾರತದ ಪ್ರಧಾನಿ ಮೋದಿ ಎಂಬ ಶೀರ್ಷಿಕೆ ನೀಡಿತ್ತು. ಹಗೆತನದ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ವಿಶ್ವಕ್ಕೆ ರಫ್ತು ಮಾಡುವ ದೇಶ ಎಂದು ಆರೋಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

SCROLL FOR NEXT