ಸಂಗೀತ್ ಸೋಮ್ (Pic Courtesy: Facebook)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್ಎಸ್) ಕಳೆದ ವಾರ 48 ಗಂಟೆಗಳಲ್ಲಿ ದೇಶ ತೊರೆಯುವಂತೆ ಎಲ್ಲಾ ಪಾಕಿಸ್ತಾನಿ ಕಲಾವಿದರಿಗೆ ಡೆಡ್ ಲೈನ್ ನೀಡಿತ್ತು. ಇದೀಗ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ಪಾಕ್ ಕಲಾವಿದರಿಗೆ ಬೂಟ್ ನಿಂದ ಹೊಡೆರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನಿ ಕಲಾವಿದರಿಗಿಂತ ಪ್ರಾಣಿಗಳೇ ಎಷ್ಟೋ ಉತ್ತಮ. ಅವರು ಭಾರತದಲ್ಲಿ ಹಣ ಗಳಿಸಿ ಉಗ್ರರಿಗೆ ಬೆಂಬಲ ನೀಡುತ್ತಿದ್ದು, ಭಾರತದ ಅನ್ನ ತಿಂದು ಭಾರತೀಯರನ್ನು ಕೊಲ್ಲಲು ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಆರೋಪಿಸಿರುವುದಾಗಿ ಸಿಎನ್ಎನ್ ನ್ಯೂಸ್ 18 ಚಾನೆಲ್ ವರದಿ ಮಾಡಿದೆ.
ಈ ಮಧ್ಯೆ ದೇಶದಲ್ಲಿ ಪಾಕ್ ಕಲಾವಿದರಿಗೆ ನಿಷೇಧ ಹೇರುವ ಬಗ್ಗೆ ಬಾಲಿವುಡ್ ನಲ್ಲೇ ಭಿನ್ನಾಭಿಪ್ರಾಯವಿದೆ. ಪಾಕ್ ಕಲಾವಿದರು ಅಭಿನಯಿಸಿರುವ ಏ ದಿಲ್ ಹೈ ಮುಷ್ಕಿಲ್ ಸೇರಿದಂತೆ ಎಲ್ಲಾ ಚಿತ್ರಗಳನ್ನು ನಿಷೇಧಿಸಬೇಕು ಎಂದು ಎಂಎನ್ಎಸ್ ಆಗ್ರಹಿಸಿದೆ.