ಅದಿಲಾಬಾದ್(ತೆಲಂಗಾಣ): ಯೋಗವನ್ನು ಸರಿಯಾಗಿ ಅಭ್ಯಾಸ ಮಾಡದ್ದಕ್ಕೆ ಹತ್ತನೇ ತರಗತಿಯ ಸುಮಾರು 10 ವಿದ್ಯಾರ್ಥಿಗಳಿಗೆ ಶಿಕ್ಷಕಿ ಭೀಕರವಾಗಿ ಹೊಡೆದ ಘಟನೆ ಇಲ್ಲಿನ ಮಂಚೆರಿಯಲ್ ನ ಸಿಸಿಸಿ ಸಿಂಗೆರಾನಿ ಹೈಸ್ಕೂಲ್ ನಲ್ಲಿ ನಡೆದಿದೆ.
ಯೋಗ ಶಿಕ್ಷಕಿ ಜಾನ್ಸಿ ಹತ್ತನೇ ತರಗತಿ ಮಕ್ಕಳಿಗೆ ಯೋಗ ಹೇಳಿಕೊಡುತ್ತಿದ್ದರು. ಆಗ ಹತ್ತು ಮಕ್ಕಳು ಯೋಗವನ್ನು ಸರಿಯಾಗಿ ಅಭ್ಯಾಸ ಮಾಡುತ್ತಿರಲಿಲ್ಲ. ಇದರಿಂದ ಸಿಟ್ಟುಗೊಂಡ ಶಿಕ್ಷಕಿ ವಿದ್ಯಾರ್ಥಿಗಳ ಕೈ ಮತ್ತು ಕಾಲಿಗೆ ಕೋಲಿನಿಂದ ಹೊಡೆದಿದ್ದಾರೆ.
ಮರುದಿನ ವಿದ್ಯಾರ್ಥಿಗಳಿಗೆ ನೋವಿನಿಂದ ನಡೆಯಲು ಸಾಧ್ಯವಾಗಲಿಲ್ಲ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ವಿದ್ಯಾರ್ಥಿಗಳ ಪೋಷಕರು ಶಾಲಾ ಪೋಷಕರ ಸಮಿತಿಗೆ ದೂರು ನೀಡಿದರು. ಮೊನ್ನೆ ಸೋಮವಾರ ಪೋಷಕರ ಸಮಿತಿ ಶಾಲಾ ವ್ಯವಸ್ಥಾಪಕ ಮಂಡಳಿಗೆ ಮತ್ತು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಯೋಗ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ಪೊಲೀಸರು, ಪೋಷಕರು ಮತ್ತು ಶಿಕ್ಷಕರ ಮಧ್ಯೆ ರಾಜಿ ಸಂಧಾನ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ.