ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಬುಧವಾರ ತಡರಾತ್ರಿ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ಸೀಮಿತ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ಸರ್ವಪಕ್ಷ ಸಭೆ ಕರೆದಿದೆ.
'ನಾವು ಭಾರತೀಯ ಸೇನೆಯೊಂದಿಗೆ ಇದ್ದೇವೆ. ಅವರು ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುತ್ತಿರುವುದರಿಂದ ಪರಿಸ್ಥತಿಯ ಗಂಭೀರತೆಯ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಬಗ್ಗೆ ವಿವರವಾಗಿ ಚರ್ಚಿಸಲು ಕೇಂದ್ರ ಸರ್ಕಾರ ಇಂದು ಮಧ್ಯಾಹ್ನ 4 ಗಂಟೆಗೆ ಸರ್ವ ಪಕ್ಷ ಸಭೆ ಕರೆದಿದ್ದು, ಸಭೆಯ ನಂತರ ಮಾತನಾಡುವುದಾಗಿ' ಕಾಂಗ್ರೆಸ್ ವಕ್ತಾರ ರಾಜ್ ಬಬ್ಬರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಭಾರತೀಯ ಸೇನೆ ನಿನ್ನೆ ತಡ ರಾತ್ರಿ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಶಿಬಿರಗಳ ಮೇಲೆ ಸೀಮಿತ ದಾಳಿ ನಡೆಸಿದ್ದು, ಗಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.