ನಕಲಿ ನೋಟು ತಡೆಗೆ ಕೇಂದ್ರದ ಮಾಸ್ಟರ್ ಪ್ಲಾನ್: ಪ್ರತಿ 3-4 ವರ್ಷಕ್ಕೆ ಭದ್ರತಾ ಗುರುತು ಬದಲು!
ನವದೆಹಲಿ: 1000, 500 ರೂ ನೋಟುಗಳ ನಿಷೇಧದ ನಂತರ ಬಿಡುಗಡೆಯಾಗಿದ್ದ ಹೊಸ 2000, 500 ರೂ ನೋಟುಗಳನ್ನೂ ನಕಲು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೊಸ ನೋಟುಗಳನ್ನು ನಕಲು ಮಾಡದಂತೆ ತಡೆಗಟ್ಟಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.
ನಕಲಿ ನೋಟುಗಳನ್ನು ತಡೆಗಟ್ಟಲು ಪ್ರತಿ 3-4 ವರ್ಷಗಳಿಗೊಮ್ಮೆ ನೋಟುಗಳ ಭದ್ರತಾ ಗುರುತನ್ನು ಬದಲಾವಣೆ ಮಾಡಲು ಗೃಹ ಸಚಿವಾಲಯದ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದೆ. ವಿದೇಶಗಳಲ್ಲಿ ನಕಲಿ ನೋಟಿನ ಹಾವಳಿ ತಡೆಗಟ್ಟಲು ಪ್ರತಿ 3-4 ವರ್ಷಕ್ಕೆ ನೋಟುಗಳ ಭದ್ರತಾ ಗುರುತನ್ನು ಬದಲಾವಣೆ ಮಾಡಲಾಗುತ್ತದೆ. ಇದೇ ಮಾದರಿಯನ್ನು ಭಾರತದಲ್ಲೂ ಜಾರಿಗೆ ತರಲು ಉನ್ನತ ಮಟ್ಟದ ಸಭೆಯಲ್ಲಿ ಗೃಹ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಗರಿಷ್ಠ ಮುಖಬೆಲೆಯ ನೋಟುಗಳಲ್ಲಿನ ಭದ್ರತಾ ಅಂಶಗಳ ಬದಲಾವಣೆ ಭಾರತೀಯ ಕರೆನ್ಸಿಗಳಲ್ಲಿ ದೀರ್ಘಕಾಲದ ವರೆಗೆ ನಡೆದಿರಲಿಲ್ಲ. ನೋಟು ನಿಷೇಧವಾಗುವವರೆಗೂ 1000 ನೋಟುಗಳಲ್ಲಿಯೂ ಸಹ ಭದ್ರತಾ ಗುರುತುಗಳಲ್ಲಿ ಪ್ರಮುಖವಾದ ಬದಲಾವಣೆಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಅಂದರೆ ಕನಿಷ್ಠ 3-4 ವರ್ಷಗಳಿಗೆ ಒಮ್ಮ ಭದ್ರತಾ ಗುರುತು ಬದಲು ಮಾಡಬೇಕೆಂಬ ಒತ್ತಾಯ ಅಧಿಕಾರಿಗಳ ವರ್ಗದಿಂದ ಕೇಳಿಬಂದಿದೆ.