ನವದೆಹಲಿ: ಕಲ್ಲಿದ್ದಲು ಹಗರಣ ಕೇಸಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಗೆ ವ್ಯವಹಾರ ಉದ್ದೇಶಕ್ಕೆ ವಿದೇಶಕ್ಕೆ ತೆರಳಲು ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಶರ್ ನಿನ್ನೆ ಜಿಂದಾಲ್ ಅವರ ಮನವಿಯನ್ನು ಪುರಸ್ಕರಿಸಿ ಏಪ್ರಿಲ್ 7ರಿಂದ 16ರವರೆಗೆ ಅಮೆರಿಕಾ ಮತ್ತು ಇಟಲಿಗೆ ತೆರಳಲು ಅನುಮತಿ ನೀಡಿದ್ದಾರೆ. ಆದರೂ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿದೆ.
ಮಾಜಿ ಸಂಸದ ನವೀನ್ ಜಿಂದಾಲ್ ವಿದೇಶಗಳಲ್ಲಿ ಯಾವ್ಯಾವ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನು ಪ್ರವಾಸ ಮುಗಿಸಿಕೊಂಡು ಬಂದ ನಂತರ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
ಸಾಕ್ಷಿಗಳನ್ನು ನಾಶಪಡಿಸದಂತೆ, ಯಾವುದೇ ಸಾಕ್ಷಿದಾರರ ಮೇಲೆ ಪ್ರಭಾವ ಬೀರದಂತೆ ಕೋರ್ಟ್ ಷರತ್ತು ವಿಧಿಸಿದೆ.
ಜಾರ್ಖಂಡ್ ನ ಅಮರ್ ಕೊಂಡ ಮುರ್ಗದಂಗಲ್ ಕಲ್ಲಿದ್ದಲು ನಿಕ್ಷೇಪದಿಂದ ಕಲ್ಲಿದ್ದಲನ್ನು ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಹಾಗೂ ಗಗನ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಗೆ ಅಕ್ರಮವಾಗಿ ನೀಡಿದೆ ಎಂದು ನವೀನ್ ಜಿಂದಾಲ್ ಸೇರಿದಂತೆ 11 ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಇವರಲ್ಲಿ ಮಾಜಿ ಸಚಿವರಾದ ದಾಸರಿ ನಾರಾಯಣ ರಾವ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತಾ ಸೇರಿದ್ದಾರೆ.