ಗೋಸಾಗಣೆ ಮಾಡುತ್ತಿದ್ದವರನ್ನು ಥಳಿಸುತ್ತಿರುವ ಗುಂಪು
ಅಲ್ವಾರ್: ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಗುಂಪೊಂದರ ಮೇಲೆ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಗಾಯಗೊಂಡವರ ಪೈಕಿ ಓರ್ವ ಮುಸ್ಲಿಂ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಅಲ್ವಾರ್ ನಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
15 ಜನರಿದ್ದ ಗುಂಪೊಂದು ಗೋವುಗಳನ್ನು ವಾಹನದಲ್ಲಿ ಸಾಗಣೆ ಮಾಡುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದಿರುವ ಗೋ ರಕ್ಷಕ ದಳದವರು ಹೆದ್ದಾರಿಯಲ್ಲಿಯೇ ಗೋ ಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಪೆಹ್ಲು ಖಾನ್ (55) ಎಂಬುವವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆಯೇ ಪೆಹ್ಲು ಖಾನ್ ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ದಾಳಿಯಲ್ಲಿ ಗಾಯಗೊಂಡ ಇನ್ನೂ ಹಲವು ಜನರು ಅಲ್ವಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವರದಿಗಳು ತಿಳಿಸಿವೆ.
15 ಮಂದಿಯಿದ್ದ ಗುಂಪೊಂದು ಶನಿವಾರ ರಾತ್ರಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದರು. ಗೋ ಸಾಗಣೆ ಮಾಡುತ್ತಿದ್ದ ಜನರು ಹರಿಯಾಣ ಮೂಲದವರೆಂದು ಹೇಳಲಾಗುತ್ತಿದೆ. ಗೋವುಗಳನ್ನು ಸಾಗಣೆ ಮಾಡುತ್ತಿದ್ದ ವಾಹನ ಅಲ್ವಾರ್ ನಲ್ಲಿರುವ ಬೆಹ್ರೊರ್ ಹೆದ್ದಾರಿ ಬಳಿ ಬರುತ್ತಿದ್ದಂತೇಯ ಗೋ ರಕ್ಷದ ದಳದವರು ದಾಳಿ ಮಾಡಿದ್ದಾರೆ. ದಾಳಿ ಮಾಡಿದವರು ವಿಹೆಚ್'ಮತ್ತು ಬಜರಂಗ ದಳದೊಂದಿಗೆ ಸಂಪರ್ಕವನ್ನು ಹೊಂದಿದ್ದ ವ್ಯಕ್ತಿಗಳಾಗಿದ್ದಾರೆಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಇನ್ನು ಗೋಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.
ಪ್ರಕರಣದಲ್ಲಿ ಇಬ್ಬರದ್ದೂ ತಪ್ಪಿದೆ: ಸಚಿವ
ದಾಳಿ ಮಾಡಿದವರು ಹಾಗೂ ದಾಳಿಗೊಳಗಾದವರು ಎರಡೂ ಗುಂಪುಗಳಲ್ಲೂ ತಪ್ಪಿದೆ ಎಂದು ರಾಜಸ್ತಾನ ರಾಜ್ಯ ಗೃಹ ಸಚಿವ ಗುಲಾಬ್ ಚಂದ್ ಕಠಾರಿಯಾ ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಎರಡೂ ಗುಂಪುಗಳಲ್ಲೂ ಸಮಸ್ಯೆಯಿರುವುದು ಕಂಡುಬಂದಿದೆ. ಗೋ ಸಾಗಣೆ ಮಾಡುವುದು ಅಕ್ರಮ ಎಂಬುದು ಜನರಿಗೆ ಗೊತ್ತಿದೆ. ಆದರೂ, ಅವರು ಗೋ ಸಾಗಣೆ ಮಾಡುವುದನ್ನು ನಿಲ್ಲಿಸಿಲ್ಲ. ಇಂತಹ ಅಪರಾಧಗಳನ್ನು ತಡೆಯಲು ಗೋ ಭಕ್ತರು ಈ ರೀತಿಯಾಗಿ ಮಾಡಿದ್ದಾರೆ. ಆಧರೆ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಯತ್ನಗಳನ್ನು ಯಾರೂ ಮಾಡಬಾರದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಜೈಪುರದಿಂದ ಕೆಲ ಗೋವುಗಳನ್ನು ಜೈಪುರದಿಂದ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬುದಾಗಿ ಮಾಹಿತಿ ತಿಳಿದುಬಂದಿತ್ತು. ಬಹ್ರೊಡ್ ಪೊಲೀಸರು ಗೋಸಾಗಣೆ ಮಾಡುತ್ತಿದ್ದ ಕೆಲ ಟ್ರಕ್ ಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಇನ್ನೂ ಕೆಲ ಟ್ರಕ್ ಗಳು ಮಾರ್ಗಗಳನ್ನು ಬದಲಿಸಿ ತಪ್ಪಿಸಿಕೊಂಡಿದ್ದವು. ಈ ಟ್ರಕ್ ಗಳನ್ನು ಸಾರ್ವಜನಿಕರೇ ನಿಲ್ಲಿಸಿ, ಗೋ ಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆಂದು ಹಿರಿಯ ಪೊಲೀಸ್ ಅದಿಕಾರಿ ಪಾರಸ್ ಜೈನ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos