ನವದೆಹಲಿ: ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ವಿಮಾನಯಾನಕ್ಕೆ ವಿಧಿಸಿದ್ದ ನಿಷೇಧವನ್ನು ಸುಮಾರು ಎರಡು ವಾರಗಳ ನಂತರ ಕೇಂದ್ರ ಸರ್ಕಾರ ಹಿಂಪಡೆದಿದೆ.
ಕೇಂದ್ರ ವಿಮಾನಯಾನ ಸಚಿವಾಲಯ ಸಂಸದ ರವೀಂದ್ರ ಗಾಯಕ್ವಾಡ್ ವಿಮಾನಯಾನ ನಿಷೇಧ ತೆರವುಗೊಳಿಸುವಂತೆ ಏರ್ ಇಂಡಿಯಾ ಸಂಸ್ಥೆಗೆ ಪತ್ರ ಬರೆದ ಹಿನ್ನೆಲೆಯಲ್ಲಿ ನಿಷೇಧ ಹಿಂಪಡೆಯಲಾಗಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಗಾಯಕ್ವಾಡ್ ಅವರು ವಿಷಾದ ವ್ಯಕ್ತಪಡಿಸಿ ನಿನ್ನೆ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸಂಸದನ ವಿಮಾಯಾನ ನಿಷೇಧವನ್ನು ಕೇಂದ್ರ ಸರ್ಕಾರ ಕಡೆಗೂ ತೆರವುಗೊಳಿಸಿದೆ.
ರವೀಂದ್ರ ಗಾಯಕ್ವಾಡ್ ಪ್ರಕರಣ ಲೋಕಸಭೆಯಲ್ಲೂ ಪ್ರತಿಧ್ವನಿಸಿತ್ತು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಅಭಿಪ್ರಾಯದ ಬಳಿಕ ಸಂಸದ ರವೀಂದ್ರ ಗಾಯಕ್ವಾಡ್ ಪ್ರಕರಣ ಸಂಬಂಧ ವಿಷಾದ ವ್ಯಕ್ತಪಡಿಸಿದ್ದಾರೆ. ಅಶೋಕ್ ಗಜಪತಿ ರಾಜು ಅವರಿಗೆ ಪತ್ರವೊಂದನ್ನು ಬರೆದಿರುವ ಗಾಯಕ್ವಾಡ್ ಅವರು, ತಮ್ಮ ಕಾರ್ಯದಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗಿದ್ದರೆ ತಾವು ವಿಷಾಧ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
ಮಾರ್ಚ್ 23ರಂದು ಪುಣೆ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಗಾಯಕ್ವಾಡ್ ಅವರು ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ್ದರು.