ನವದೆಹಲಿ: ದಕ್ಷಿಣ ಭಾರತೀಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯ ಮಾಜಿ ಸಂಸದ ತರುಣ್ ವಿಜಯ್ ಕ್ಷಮೆ ಯಾಚಿಸಿದ್ದಾರೆ.
ಭಾರತದಲ್ಲಿ ವರ್ಣ ಭೇದ ಇಲ್ಲ ಎಂಬುದನ್ನು ಹೇಳುವ ಭರದಲ್ಲಿ ತರುಣ್ ವಿಜಯ್ ದಕ್ಷಿಣ ಭಾರತೀಯರು ಕಪ್ಪು ಬಣ್ಣದವರೆಂದು ಹೇಳಿದ್ದರು. ಒಂದು ವೇಳೆ ಭಾರತದಲ್ಲಿ ವರ್ಣ ಭೇದ ಇದ್ದಿದ್ದರೆ ದಕ್ಷಿಣ ಭಾರತೀಯರೊಂದಿಗೆ ಏಕೆ ಉಳಿದ ಭಾರತೀಯರು ಇರುತ್ತಿದ್ದರು ಎಂದು ತರುಣ್ ವಿಜಯ್ ಹೇಳಿದ್ದರು.
ಭಾರತದಲ್ಲಿ ಆಫ್ರಿಕನ್ನರ ಮೇಲೆ ದಾಳಿ ನಡೆಯುವುದಕ್ಕೂ ವರ್ಣ ಭೇದ ನೀತಿಗೂ ಸಂಬಂಧವಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳಲು ಹೋಗಿ ದಕ್ಷಿಣ ಭಾರತೀಯರ ಬಣ್ಣದ ಬಗ್ಗೆ ಇನ್ನೂ ಪ್ರಸಾರವಾಗದ ಟಿವಿ ಕಾರ್ಯಕ್ರಮವೊಂದರಲ್ಲಿ ತರುಣ್ ವಿಜಯ್ ಮಾತನಾಡಿದ್ದು ವಿವಾದಕ್ಕೆ ತಿರುಗಿತ್ತು. ತಮ್ಮ ಹೇಳಿಕೆಗೆ ತೀವ್ರ ವಿರೋಧ ಎದುರಾಗುತ್ತಿದ್ದಂತೆಯೇ ತರುಣ್ ವಿಜಯ್ ಟ್ವಿಟರ್ ನಲ್ಲಿ ಕ್ಷಮೆ ಯಾಚಿಸಿದ್ದು, ನನ್ನ ಹೇಳಿಕೆಯ ಉದ್ದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವವರಿಗೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಬಾಯ್ತಪ್ಪಿಯೂ ದಕ್ಷಿಣ ಭಾರತೀಯರನ್ನು ಕಪ್ಪು ವರ್ಣದವರೆಂದು ಹೇಳಿಲ್ಲ. ಸಂಪೂರ್ಣ ಕಾರ್ಯಕ್ರಮ ವೀಕ್ಷಿಸುವ ತಾಳ್ಮೆ ಇರಲಿ ಎಂದು ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಾನು ಪ್ರಾಣವನ್ನಾದರೂ ಕೊಡುತ್ತೇನೆ, ಆದರೆ ನನ್ನ ದೇಶದ ಜನತೆ, ನನ್ನ ದೇಶದ ಸಂಸ್ಕೃತಿಯನ್ನು ಗೇಲಿ ಮಾಡಲು ಹೇಗೆ ಸಾಧ್ಯ? ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ಮುನ್ನ ಯೋಚನೆ ಮಾಡಿ ಎಂದು ತರುಣ್ ವಿಜಯ್ ಹೇಳಿದ್ದಾರೆ.