ನವದೆಹಲಿ: ದಕ್ಷಿಣ ಭಾರತೀಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಸಂಸದ ತರುಣ್ ವಿಜಯ್ ವಿರುದ್ಧ ಕಾಂಗ್ರೆಸ್ ನಾಯಕ ಮಾಜಿ ಸಚಿವ ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತೀಯರನ್ನು ಕಪ್ಪು ವರ್ಣದವರೆಂದು ಹೇಳಿದ್ದ ತರುಣ್ ವಿಜಯ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚಿದಂಬರಂ, ತರುಣ್ ವಿಜಯ್ ನಾವು ದಕ್ಷಿಣ ಭಾರತದ ಕಪ್ಪು ವರ್ಣದವರೊಂದಿಗೆ ಜೀವಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆ ಹೇಳಿಕೆಯಲ್ಲಿ ನಾವು ಎಂದರೆ ಯಾರು ಎಂದು ಅವರನ್ನು ಪ್ರಶ್ನಿಸಿ ಎಂದು ಚಿದಂಬರಂ ಟ್ವಿಟರ್ ನಲ್ಲಿ ಹೇಳಿದ್ದಾರೆ.
ಮೂಲತಃ ತಮಿಳುನಾಡಿನವರಾದ ಚಿದಂಬರಂ, ತರುಣ್ ವಿಜಯ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ತರುಣ್ ವಿಜಯ್ ಭಾರತೀಯರು ಎಂದರೆ ಅದು ಕೇವಲ ಬಿಜೆಪಿ ಆರ್ ಎಸ್ಎಸ್ ನವರು ಮಾತ್ರವೇ ಎಂದು ಭಾವಿಸಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ದಕ್ಷಿಣ ಭಾರತೀಯರ ಬಗ್ಗೆ ತರುಣ್ ವಿಜಯ್ ನೀಡಿದ್ದ ಹೇಳಿಕೆಗೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ.