ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದಾಗಿ ಅಲ್ಲಿನ ಪ್ರಮುಖ ರಸ್ತೆಯೊಂದು ಕುಸಿದಿದ್ದು, ಪರಿಣಾಮ ಒಂದು ಕಾರು ಹಾಗು ಸರ್ಕಾರ ಸಾರಿಗೆ ಸಂಸ್ಥೆಯ ಬಸ್ ವೊಂದು ಜಖಂ ಆದ ಘಟನೆ ಭಾನುವಾರ ನಡೆದಿದೆ.
ಚೆನ್ನೈನ ಅಣ್ಣಾಸಾಲೈ ಬಳಿಯಿರುವ ಅಮೆರಿಕ ರಾಯಭಾರಿ ಕಚೇರಿಯ ಎದುರಿನ ಮುಖ್ಯ ರಸ್ತೆ ದಿಢೀರ್ ಕುಸಿದ ಪರಿಣಾಮವಾಗಿ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ ಮತ್ತು ಕಾರು ಸಿಲುಕಿಕೊಂಡ ಆತಂಕಕಾರಿ ಘಟನೆ ನಡೆಯಿತು. ಅದೃಷ್ಟವಷಾತ್ ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಕಾರಿನಲ್ಲಿದ್ದ ಪ್ರಯಾಣಿಕರಿಗಾಗಲೀ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೂಡಲೇ ಆ ರಸ್ತೆಯಲ್ಲಿನ ವಾಹನ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದು, ಮೆಟ್ರೋ ಕಾಮಗಾರಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ.
ಪ್ರಸ್ತುತ ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ರಸ್ತೆ ಕುಸಿಯಲು ಕಾರಣ ಏನು ಎಂದು ಈ ವರೆಗೂ ತಿಳಿದುಬಂದಿಲ್ಲ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ ಸಮೀಪದಲ್ಲಿರುವ ಮೆಟ್ರೋ ಸುರಂಗದಿಂದಾಗಿ ಮಣ್ಣು ಶಿಥಿಲಗೊಂಡು ಭೂಮಿ ಕುಸಿದಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.