ದೇಶ

ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ-ಪಾಕ್ ಸಮಸ್ಯೆ ಬಗೆಹರಿಸಿಕೊಳ್ಳಬೇಕು: ಆಸ್ಕರ್ ಫರ್ನಾಂಡಿಸ್

Manjula VN
ನವದೆಹಲಿ: ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರು ಗುರುವಾರ ಹೇಳಿದ್ದಾರೆ. 
ಭಾರತೀಯ ಪ್ರಜೆ ಕುಲ್'ಭೂಷಣ್ ಜಾದವ್ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಭಾರತೀಯ ಪ್ರಜೆಗೆ ಪಾಕಿಸ್ತಾನ ಗಲ್ಲು ಶಿಕ್ಷೆ ನೀಡಿರುವುದು ನಿಜಕ್ಕೂ ಬೇಸರವನ್ನು ತಿಂದಿದೆ. ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದರೆ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸೇನಾ ನ್ಯಾಯಾಲಯ, ಗೂಢಚಾರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಕ್ಕೆ ಭಾರತ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿತ್ತು. ಅಲ್ಲದೆ ಇದೊಂದು ಪೂರ್ವ ಯೋಜಿತ ಕೊಲೆ ಎಂದು ಹೇಳಿತ್ತು. 
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು, ಪಾಕಿಸ್ತಾನ ಶಾಂತಿ-ಪ್ರೀತಿಯ ದೇಶ. ಆದರೆ ಇದೇ ನಮ್ಮ ದೌರ್ಬಲ್ಯ ಎಂದು ಭಾವಿಸಬೇಡಿ. ಪಾಕಿಸ್ತಾನ ಎಲ್ಲಾ ದೇಶಗಳೊಂದಿಗೆ, ವಿಶೇಷವಾಗಿ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಪರಸ್ಪರ ಸಂಘರ್ಷದ ಬದಲಿಗೆ ಸಹಕಾರ ನೀಡುವುದು ಪಾಕಿಸ್ತಾನದ ನೀತಿ. ನಮ್ಮ ಶಸ್ತ್ರಸಜ್ಜಿದ ಸೇನಾ ಪಡೆಗಳು ಯಾವುದೇ ರೀತಿಯ ಬೆದರಿಕೆಗೆ ಪ್ರತಿಕ್ರಿಯಿಸಲು ಸಂಪೂರ್ಣ ಸಾಮರ್ಥ್ಯ ಹೊಂದಿದ್ದು, ಯಾವುದೇ ಸವಾಲು ಎದುರಿಸಲು ಸಿದ್ಧವಾಗಿವೆ ಎಂದು ಹೇಳಿದ್ದರು. 
SCROLL FOR NEXT